ಗುಂಡ್ಲುಪೇಟೆ (ಚನ್ನರಾಯಪಟ್ಟಣ) : ತಾಲೂಕಿನ ತೆರಕಣಾಂಬಿ ಗ್ರಾಮದ ಪದವಿ ಕಾಲೇಜನ್ನು ಸ್ಥಳಾಂತರ ಮಾಡದೆ ಈಗಿರುವ ಸ್ಥಳದಲ್ಲಿಯೇ ಉಳಿಸಿಕೊಳ್ಳುವ ಸಲುವಾಗಿ ವಿದ್ಯಾರ್ಥಿನಿಯರು ಗ್ರಾಮದ ಪ್ರತಿ ಮನೆಗೆ ಭೇಟಿ ನೀಡಿ ಬೆಂಬಲ ಕೋರುತ್ತಿದ್ದಾರೆ.
ವಿದ್ಯಾರ್ಥಿನಿಯರು ಕಾಲೇಜು ಉಳಿಸಿ ಅಭಿಯಾನ ಆರಂಭಿಸಿದ್ದಾರೆ. ಪ್ರತಿಯೊಬ್ಬರ ಬೆಂಬಲ ಕೋರುತ್ತಿದ್ದಾರೆ. ತಾಲೂಕಿನ ತೆರಕಣಾಂಬಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಉದ್ಘಾಟನೆಗೂ ಮೊದಲೇ ರಾಯಭಾಗದ ಹಾರೋಹಳ್ಳಿಗೆ ಸ್ದಳಾಂತರಿಸಲಾಗಿದೆ. ಇದನ್ನು ಇರುವಲ್ಲಿಯೇ ಉಳಿಸಿ ಎಂದು ಮನೆ ಮನೆಗೆ ತೆರಳಿ ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ.
ತೆರಕಣಾಂಬಿಯಲ್ಲಿ ಉತ್ತಮ ಗುಣಮಟ್ಟದ ಸುಸಜ್ಜಿತ ಕಟ್ಟಡವಿರುವ ಕಾಲೇಜಿದೆ. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ. ಇದರಿಂದ ಈ ಭಾಗದ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಅಲ್ಲದೇ, ಇಲ್ಲಿ ಹೆಚ್ಚಿನ ಸಂಖ್ಯೆಯ ಹೆಣ್ಣುಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈಗ ಕಾಲೇಜು ಸ್ಥಳಾಂತರ ಮಾಡಿದರೆ ನಾವು ನಡು ಬೀದಿಗೆ ಬರಬೇಕಾಗುತ್ತದೆ. ಆದ್ದರಿಂದ, ನಮ್ಮ ಕಾಲೇಜು ಸ್ಥಳಾಂತರ ಮಾಡಿರುವ ನಿರ್ಧಾರವನ್ನು ಸರ್ಕಾರ ಕೈಬಿಡಬೇಕು. ಇದಕ್ಕೆ ವರ್ತಕರು, ಸಾರ್ವಜನಿಕರು ತೆರಕಣಾಂಬಿ ಭಾಗದ ಎಲ್ಲಾ ಹಳ್ಳಿಯ ಪೋಷಕರು ಸಹಕರಿಸಿ ಪ್ರತಿಭಟನೆಗೆ ಬೆಂಬಲ ನೀಡುವಂತೆ ವಿದ್ಯಾರ್ಥಿಗಳು ಮನೆಗಳಿಗೆ, ಅಂಗಡಿ-ಮುಂಗಟ್ಟು, ಮಾರುಕಟ್ಟೆಗಳಿಗೆ ತೆರಳಿ ಕೈಜೋಡಿಸಿ ಕೇಳಿಕೊಳ್ಳುತ್ತಿದ್ದಾರೆ.
ಈ ಕಾಲೇಜಿನಲ್ಲಿ ಅನೇಕ ಗ್ರಾಮೀಣ ಭಾಗದ ಬಡ ಹಾಗೂ ಹಿಂದುಳಿದ ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದಾರೆ. ಒಂದು ವೇಳೆ ಕಾಲೇಜು ಸ್ಥಳಾಂತರವಾದರೆ ಇದರಲ್ಲಿನ ಅರ್ಧ ವಿದ್ಯಾರ್ಥಿನಿಯರು ವ್ಯಾಸಾಂಗ ಮೊಟಕುಗೊಳಿಸುತ್ತಾರೆ. ಬಡತನ ಅಡ್ಡಿಯಾದರೂ ಸಹ ಉನ್ನತ ಶಿಕ್ಷಣ ಪಡೆಯಬೇಕೆಂಬ ಇವರ ಕನಸು ನುಚ್ಚು ನೂರಾಗುತ್ತದೆ ಎಂದು ಅಧ್ಯಾಪಕರೊಬ್ಬರು ತಿಳಿಸಿದರು.
ಕಾಲೇಜು ಸ್ಥಳಾಂತರವಾದ್ರೆ ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ವ್ಯಾಸಾಂಗ ಮಾಡುವಷ್ಟು ಅನುಕೂಲ ನಮಗೆ ಇಲ್ಲ. ಇದರಿಂದಾಗಿ ಶಿಕ್ಷಣವನ್ನೇ ಮೊಟಕುಗೊಳಿಸಬೇಕಾಗುತ್ತದೆ ಎಂದು ವಿದ್ಯಾರ್ಥಿನಿಯರು ಅಳಲು ತೋಡಿಕೊಂಡರು.