ಚಾಮರಾಜನಗರ: ಆಮ್ಲಜನಕ ದುರಂತದಲ್ಲಿ ಮೃತಪಟ್ಟ 24 ಜನರ ಕುಟುಂಬಗಳಿಗೆ ನಟ ಸುದೀಪ್ ನೆರವಿನ ಹಸ್ತ ಚಾಚಿದ್ದು ಕಿಚ್ಚ ಸುದೀಪ್ ಚಾರಿಟಬಲ್ ಟ್ರಸ್ಟ್ ಈಗಾಗಲೇ ಸಂತ್ರಸ್ತರ ಮಾಹಿತಿ ಕಲೆಹಾಕುತ್ತಿದೆ.
ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬದ ಮಾಹಿತಿಯನ್ನು ಕಲೆ ಹಾಕುವಂತೆ ಕಿಚ್ಚ ಸುದೀಪ್ ಚಾರಿಟಬಲ್ ಟ್ರಸ್ಟ್ ಜಿಲ್ಲೆಯ ಅಖಿಲ ಕರ್ನಾಟಕ ವಾಲ್ಮೀಕಿ ರತ್ನ ಬಾದ್‌ಷಾ ಕಿಚ್ಚ ಸುದೀಪ್ ಸೇನೆಗೆ ತಿಳಿಸಿದ್ದು, ಅದರಂತೆ ಈ ಸಂಘಟನೆಯು ಈಗ 10 ಸಂತ್ರಸ್ತ ಕುಟುಂಬಗಳ ಮಾಹಿತಿ ಕಲೆಹಾಕಿದೆ. ಇನ್ನುಳಿದ 14 ಮೃತ ಕುಟುಂಬಗಳ ಮಾಹಿತಿ ಕಲೆಹಾಕುತ್ತಿದ್ದು ಕೆಲವು ವಿಳಾಸಗಳು ತಪ್ಪಾಗಿರುವುದು ತಲೆನೋವಾಗಿದೆ ಎಂದು ಸೇನೆಯ ಚಾಮರಾಜನಗರ ಉಸ್ತುವಾರಿ ಅಗ್ರಹಾರ ರಂಗಸ್ವಾಮಿ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
ಸದ್ಯಕ್ಕೆ, ಮೃತಪಟ್ಟವರ ಕುಟುಂಬಗಳಿಗೆ ಒಂದು ತಿಂಗಳಿಗಾಗುವಷ್ಟು ಆಹಾರ ಕಿಟ್ ನೀಡಲು ತಯಾರಿ ಮಾಡಿಕೊಂಡಿದ್ದು ಲಾಕ್ಡೌನ್ ಮುಗಿದ ಬಳಿಕ ಹಣಕಾಸಿನ ನೆರವು, ಮಕ್ಕಳನ್ನು ದತ್ತು ತೆಗೆದುಕೊಂಡು ವಿದ್ಯಾಭ್ಯಾಸ ಕೊಡಿಸುವುದು, ವೃದ್ಧ ತಂದೆ-ತಾಯಿಗೆ ಶಾಶ್ವತ ನೆರವು ನೀಡಲು ಚಾರಿಟಬಲ್ ಟ್ರಸ್ಟ್ ಮುಂದಾಗಿದೆ ಎಂದು ಅವರು ತಿಳಿಸಿದರು.
ಅನಾಥ ಕಂದಮ್ಮನ ದತ್ತು:
ಕೋವಿಡ್ಗೆ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥವಾಗಿರುವ ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಗ್ರಾಮದ 4 ವರ್ಷದ ಬಾಲಕಿಯನ್ನು ದತ್ತು ತೆಗೆದುಕೊಂಡು ವಿದ್ಯಾಭ್ಯಾಸದ ಸಂಪೂರ್ಣ ಜವಾಬ್ದಾರಿ ಹೊರುವ ಕುರಿತು ಚಿಂತನೆ ನಡೆದಿದೆ. ಆ ಕುಟುಂಬದವರ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ ಎಂದು ರಂಗಸ್ವಾಮಿ ತಿಳಿಸಿದ್ದಾರೆ . ಆಕ್ಸಿಜನ್ ದುರಂತ ನಡೆದ ದಿನವೇ ಚಾಮರಾಜನಗರಕ್ಕೆ ಆಮ್ಲಜನಕ ಪೂರೈಕೆ ಮಾಡುಬಹುದೇ ಎಂಬ ಆಲೋಚನೆ ಬಂದಿತ್ತು. ಆದರೆ, ಖಾಸಗಿಯಾಗಿ ಅದು ಸಿಗದಿರುವುದು ಮತ್ತು ಸರ್ಕಾರವೇ ಕೊಡಬೇಕಿದ್ದರಿಂದ ಆಕ್ಸಿಜನ್ ಪೂರೈಕೆ ಬದಲಾಗಿ ಸಂತ್ರಸ್ತ ಕುಟುಂಬಗಳಿಗೆ ಸುದೀಪ್ ನೆರವಿನ ಹಸ್ತ ಚಾಚಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಆಕ್ಸಿಜನ್ ದುರಂತದ ಬೆನ್ನಲ್ಲೇ ಬೆಡ್ ಕೊರತೆ... ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಬಗೆಹರಿಯದ ಸಮಸ್ಯೆ