ಚಾಮರಾಜನಗರ : ಆ್ಯಕ್ಸಿಜನ್ ದುರಂತಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡೆಸಿದ ಅಧಿಕಾರಿಗಳ ಸಭೆಯಲ್ಲಿ ಸತ್ಯ ಬಟಾಬಯಲಾಗಿದೆ. ದುರಂತದ ದಿನ ಅಧಿಕಾರಿಗಳ ನಿರ್ಲಕ್ಷ್ಯತನ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಮಧ್ಯಾಹ್ನ 12 ರಿಂದ 1 ಗಂಟೆಯವರೆಗೆ ಅಧಿಕಾರಿಗಳ ಜೊತೆ ಕೈ ನಾಯಕರು ಸಭೆ ನಡೆಸಿದರು. ಈ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ ಆರ್ ರವಿ ಅವರಿಗೆ 6000 ಸಾವಿರ ಲೀ. ಆಕ್ಸಿಜನ್ ಪ್ಲಾಂಟ್ ಮಧ್ಯಾಹ್ನ 2ರ ಸುಮಾರಿಗೆ ಖಾಲಿಯಾಗಿದೆ.
ರಾತ್ರಿ ಹತ್ತಾದರೂ ಜಿಲ್ಲಾಸ್ಪತ್ರೆಯಲ್ಲಿನ ಆಮ್ಲಜನಕ ಕೊರತೆ ಬಗ್ಗೆ ಡಿಸಿ ಅವರಿಗೆ ಮಾಹಿತಿಯನ್ನೇ ಡೀನ್ ಕೊಟ್ಟಿರಲಿಲ್ಲ ಎಂದು ಜಿಲ್ಲಾಧಿಕಾರಿಯೇ ಸಿದ್ದರಾಮಯ್ಯ ಅವರಿಗೆ ತಿಳಿಸಿದ್ದಾರೆ.
ಪ್ರತಿದಿನ 350 ಸಿಲಿಂಡರ್‌ನಷ್ಟು ಆಮ್ಲಜನಕದ ಅಗತ್ಯತೆ ಇದೆ. ಕಳೆದ 10 ದಿನಗಳಿಂದ ಆಕ್ಸಿಜೆನ್ ಕೊರತೆ ಇದೆ. ಭಾನುವಾರ ಕೇವಲ 126 ಸಿಲಿಂಡರ್ ಅಷ್ಟೇ ಪೂರೈಕೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ. ಅಂದು 123 ಮಂದಿಗೆ ಆಕ್ಸಿಜನ್ ನೀಡಲಾಗಿತ್ತು.
ನನ್ನನ್ನು ಕನ್ಫ್ಯೂಸ್ ಮಾಡಬೇಡಿ : ಉತ್ತರ ಕೊಡಲು ತಡಬಡಾಯಿಸುತ್ತಿದ್ದ ಜಿಲ್ಲಾ ಸರ್ಜನ್ ಹಾಗೂ ಗೊಂದಲದ ಉತ್ತರ ಕೊಡುತ್ತಿದ್ದ ಡೀನ್ ಸಂಜೀವ್ ಕುಮಾರ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ, ನನ್ನನ್ನು ಕನ್ಫ್ಯೂಸ್ ಮಾಡಬೇಡಿ, ನೀವು ಹೇಳಿದನ್ನೆಲ್ಲ ಕೇಳಲು ನಿಮ್ಮ ಸಚಿವನಲ್ಲ. ನಾನೇನೂ ಇಲ್ಲಿ ಶಿಕ್ಷೆ ಕೊಡಲು ಬಂದಿಲ್ಲ, ಏನಾಯಿತೆಂದು ನಿಜಾಂಶ ಹೇಳಿ ಎಂದು ಕ್ಲಾಸ್ ತೆಗೆದುಕೊಂಡರು.
ಮಾತು ಬದಲಾಯಿಸಿದ ಡಿಸಿ : ಎಲ್ಲವೂ ಸರಿಯಿದೆ, ಆಮ್ಲಜನಕ ಕೊರತೆಯಿಲ್ಲ ಎಂದು ಪತ್ರಕರ್ತರಿಗೆ ಹೇಳುತ್ತಿದ್ದ ಜಿಲ್ಲಾಧಿಕಾರಿ ಅವರು ಸಿದ್ದರಾಮಯ್ಯನವರ ಸಭೆಯಲ್ಲಿ ಬೇಡಿಕೆಗೆ ತಕ್ಕಂತೆ ಪೂರೈಕೆಯಾಗಲಿಲ್ಲ, 10 ದಿನಗಳಿಂದ ಕೊರತೆ ಇತ್ತು ಎಂದು ಹೇಳಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.