ಚಾಮರಾಜನಗರ : ದಕ್ಷಿಣ ಭಾರತದ ಪ್ರಮುಖ ಯಾತ್ರಾಸ್ಥಳವಾದ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಮಹಾಶಿವರಾತ್ರಿ ಜಾತ್ರೆಯ ಪ್ರಯುಕ್ತ ಭಕ್ತಸಾಗರವೇ ಹರಿದು ಬಂದಿದ್ದು, ಪ್ರಾಧಿಕಾರಕ್ಕೆ ಭರ್ಜರಿ ಆದಾಯವೂ ದೊರೆತಿದೆ. ಫೆ. 17 ರಿಂದ 21 ರವರೆಗೆ ಮಹಾಶಿವರಾತ್ರಿ ಹಬ್ಬ ಆಚರಣೆ ನಡೆದಿದ್ದು 12 ಲಕ್ಷ ಮಂದಿ ಈ ದಿನಗಳಲ್ಲಿ ಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದಾರೆ. ಭಕ್ತರು ವಿವಿಧ ಉತ್ಸವ, ಲಾಡು ಪ್ರಸಾದ ಹಾಗೂ ಇನ್ನಿತರ ಸೇವೆಗಳನ್ನು ನಡೆಸಿದ್ದು ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರಕ್ಕೆ 2.70 ಕೋಟಿ ರೂಪಾಯಿ ಆದಾಯ ಕೇವಲ 5 ದಿನದಲ್ಲೇ ಹರಿದುಬಂದಿದೆ ಎಂಬ ಮಾಹಿತಿ ದೊರೆತಿದೆ.
ಬೆಂಗಳೂರು, ರಾಮನಗರ, ಮಂಡ್ಯ, ಕನಕಪುರದ ಜನರು ಕಾವೇರಿ ಸಂಗಮದಲ್ಲಿ ನದಿ ದಾಟಿ ಪಾದಯಾತ್ರೆ ಮೂಲಕ ಆಗಮಿಸಿ ಶಿವರಾತ್ರಿ ಜಾತ್ರೆ ಕಣ್ತುಂಬಿಕೊಂಡಿದ್ದಾರೆ. ಬೆಟ್ಟದ ಜಾತ್ರೆಗಾಗಿ ಸಾರಿಗೆ ಸಂಸ್ಥೆಯು 5 ದಿನಗಳ ಕಾಲ ನಿರಂತರ 500 ಬಸ್ ಸೇವೆ ಒದಗಿಸಿತ್ತು. ತಮಿಳುನಾಡಿನಿಂದಲೂ ಮಾದೇಶ್ವರನ ದರ್ಶನ ಪಡೆಯಲು ದೊಡ್ಡ ಸಂಖ್ಯೆಯ ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ ಬಸವ ವಾಹನ, ಹುಲಿ ವಾಹನ, ರುದ್ರಾಕ್ಷಿ ಮಂಟಪೋತ್ಸವ ಸೇರಿದಂತೆ ಇತರೆ ಸೇವೆಗಳಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ: ನಮ್ಮದು ಆರ್ಥಿಕ ಶಿಸ್ತು, ಆರ್ಥಿಕ ಪ್ರಗತಿಯ ಉಳಿತಾಯ ಬಜೆಟ್: ಸಿಎಂ ಬೊಮ್ಮಾಯಿ
ಜಾತ್ರಾ ಮಹೋತ್ಸವದಲ್ಲಿ ಚಿನ್ನದ ರಥ ಮತ್ತು ಉತ್ಸವಗಳಿಂದ 88,21,257 ರೂ. ವಿವಿಧ ಸೇವೆಗಳಿಂದ 6,71,700 ರೂ. ಮಿಶ್ರ ಪ್ರಸಾದದಿಂದ 11,56,250 ರೂ. ಮಾಹಿತಿ ಕೇಂದ್ರದಿಂದ 6,16,250 ರೂ. ಪುದುವಟ್ಟು ಸೇವೆ 1,45,072 ರೂ. ವಿಶೇಷ ಪ್ರವೇಶ ಶುಲ್ಕದಿಂದ 55,38,000 ಲಾಡು ಮಾರಾಟದಿಂದ 92,59,975 ರೂ. ಕಲ್ಲು ಸಕ್ಕರೆಯಿಂದ 1,08,420 ರೂ. ತೀರ್ಥ ಪ್ರಸಾದದಿಂದ 2,24,020 ರೂ. ದೇವರ ಪ್ರಸಾದ ಬ್ಯಾಗ್‌ನಿಂದ 1,49,670 ರೂ. ಅಕ್ಕಿ ಸೇವೆಯಿಂದ 2,64,450 ರೂ. ಹಾಗೂ ಇತರ ಸೇವೆಗಳಿಂದ 1,17,574 ರೂ. ಸೇರಿದಂತೆ ಒಟ್ಟು 2,70,72,638 ರೂ. ಆದಾಯ ಸಂಗ್ರಹವಾಗಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಕಾತ್ಯಾಯಿಣಿ ತಿಳಿಸಿದರು.
ಇದನ್ನೂ ಓದಿ : ಮೈಸೂರು: ತ್ರಿನೇಶ್ವರ ದೇವಾಲಯಕ್ಕೆ ಬಂತು 11 ಕೆ.ಜಿ ತೂಕದ ಶಿವನ ಚಿನ್ನದ ಮುಖವಾಡ