ಚಾಮರಾಜನಗರ: ಒಂದೆಡೆ ಒಮಿಕ್ರಾನ್ ಮತ್ತೊಂದೆಡೆ ಗಡಿರಾಜ್ಯಗಳಲ್ಲಿ ಹೆಚ್ಚುತ್ತಿರುವ ಕೊರೊನಾ ಇವ್ಯಾವುದರ ಭೀತಿಯಿಲ್ಲದೇ ಧಾರವಾಹಿ ಚಿತ್ರೀಕರಣ ನೋಡಲು ನೂರಾರು ಮಂದಿ ಮುಗಿಬಿದ್ದ ಘಟನೆ ನಗರದ ಚಾಮರಾಜೇಶ್ವರ ದೇವಾಲಯದಲ್ಲಿ ನಡೆದಿದೆ.
ಖಾಸಗಿ ಚಾನೆಲ್ನಲ್ಲಿ ಪ್ರಸಾರವಾಗುವ 'ಪಾರು' ಎಂಬ ಧಾರವಾಹಿಯ ಚಿತ್ರೀಕರಣ ಕಳೆದ ಮೂರು ದಿನಗಳಿಂದ ಚಾಮರಾಜೇಶ್ವರ ದೇವಾಲಯದಲ್ಲಿ ನಡೆಯುತ್ತಿದೆ. ಇಷ್ಟು ದಿನ ಒಳಾವರಣದಲ್ಲಿ ನಡೆಯುತ್ತಿದ್ದ ಚಿತ್ರೀಕರಣ ಇಂದು ದೇಗುಲದ ಹೊರಗಡೆ ನಡೆಯುತ್ತಿರುವುದರಿಂದ ಮಹಿಳೆಯರು, ಕಾಲೇಜು ವಿದ್ಯಾರ್ಥಿಗಳು ಚಿತ್ರೀಕರಣ ನೋಡಲು ಮುಗಿಬಿದ್ದಿದ್ದಾರೆ.
ಪೊಲೀಸರು, ನಗರಸಭೆ ಸಿಬ್ಬಂದಿ ಈ ಬಗ್ಗೆ ಮೌನ ವಹಿಸಿದ್ದಾರೆ. ನಿನ್ನೆಯಷ್ಟೇ ಡಿಸಿ, ಎಸ್ಪಿ ರೌಂಡ್ಸ್ ಹಾಕಿ ಕೊರೊನಾ ಜಾಗೃತಿ, ಮಾಸ್ಕ್ ಧರಿಸುವಂತೆ ಜಾಥಾ ನಡೆಸಿದರೂ ಇಂದು ಯಾವುದೇ ಪ್ರಯೋಜನವಿಲ್ಲದಂತಾಗಿದೆ. ಸೀರಿಯಲ್ ಮೇನಿಯಾದಿಂದಾಗಿ ಜನರು ಕಿಲ್ಲರ್ ಕೊರೊನಾ ಆಹ್ವಾನಿಸುತ್ತಿರುವಂತೆ ನೂರಾರು ಮಂದಿ ಮಾಸ್ಕ್ ಧರಿಸದೇ ಒಬ್ಬರ ಮೇಲೋಬ್ಬರು ಬಿದ್ದು ಚಿತ್ರೀಕರಣ ಕಣ್ತುಂಬಿಕೊಳ್ಳುತ್ತಿದ್ದಾರೆ.
ಇನ್ನು ಜಿಲ್ಲೆಯ ಜನರು ಓಂಶಕ್ತಿ ಮತ್ತು ಶಬರಿಮಲೆ ದೇವಾಲಯಕ್ಕೂ ಭೇಟಿ ಕೊಡುತ್ತಿದ್ದು, ಅಲ್ಲಿಂದ ಕೊರೊನಾ ಹೊತ್ತುಬರುವ ಆತಂಕವೂ ಈಗ ಎದುರಾಗಿದೆ.
ಇದನ್ನೂ ಓದಿ: ಡಿ ಕೆ ಶಿವಕುಮಾರ್ಗೆ ಕೋವಿಡ್ ಬಗ್ಗೆ ಗೊತ್ತಿಲ್ಲ ಅನಿಸುತ್ತೆ: ಸಚಿವ ಸುಧಾಕರ್ ಟಾಂಗ್