ಚಾಮರಾಜನಗರ : ಗ್ರಾಪಂ ಚುನಾವಣಾ ಫಲಿತಾಂಶ ದಿನದಂದು ಸಂಘ ಪರಿವಾರದವರೇ ಪಾಕ್ ಪರ ಘೋಷಣೆಗಳನ್ನು ಕೂಗಿದ್ದಾರೆಂದು ಆರೋಪಿಸಿ ಎಸ್ಡಿಪಿಐ ಕಾರ್ಯಕರ್ತರು ನಗರದಲ್ಲಿ ಪ್ರತಿಭಟಿಸಿದರು.
ಸಂಘ ಪರಿವಾರದವರನ್ನು ಬಂಧಿಸಿ, ಅಮಾಯಕರನ್ನು ಬಿಡುಗಡೆಗೊಳಿಸಬೇಕೆಂಬ ಘೋಷಣೆಗಳನ್ನು ಕೂಗುತ್ತಾ ಲಾರಿ ಸ್ಟಾಂಡ್ನಿಂದ ಜಿಲ್ಲಾಡಳಿತ ಭವನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಭುವನೇಶ್ವರಿ ವೃತ್ತದಲ್ಲಿ ಅರ್ಧ ತಾಸಿಗೂ ಹೆಚ್ಚು ಕಾಲ ರಸ್ತೆ ತಡೆದು ಸಂಘ ಪರಿವಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರ ಹಾಕಿದರು.
ಗ್ರಾಪಂ ಫಲಿತಾಂಶದ ದಿನ ಪಾಕ್ ಪರ ಘೋಷಣೆಗಳನ್ನು ಕೂಗಿರುವುದು ಸಂಘ ಪರಿವಾರದವರೇ ಹೊರತು ಎಸ್ಡಿಪಿಐ ಕಾರ್ಯಕರ್ತರಲ್ಲ. ಆದರೂ, ಬಿಜೆಪಿ ಸರ್ಕಾರದ ಒತ್ತಡಕ್ಕೆ ಮಣಿದು ಪೊಲೀಸರು ಅಮಾಯಕರನ್ನು ಬಂಧಿಸಿದ್ದಾರೆ. ಬಿಜೆಪಿಗರು ಪಾಕ್ ಪರ ಘೋಷಣೆ ಕೂಗುತ್ತಿರುವ ವಿಡಿಯೋ ವೈರಲ್ಲಾಗುತ್ತಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಅಮಾಯಕರನ್ನು ಬಿಡುಗಡೆಗೊಳಿಸಿ ಸಂಘ ಪರಿವಾರದ ನೈಜ ಆರೋಪಿಗಳನ್ನು ಕೂಡಲೇ ಬಂಧಿಸಿಬೇಕು ಎಂದು ಒತ್ತಾಯಿಸಿ ಡಿಸಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.