ಕೊಳ್ಳೇಗಾಲ: ತಾಲೂಕಿನ ಹೊಂಡರಬಾಳು ಗ್ರಾಮದ ನಿವಾಸಿ ವೀರಭದ್ರಸ್ವಾಮಿ ಹಾಗೂ ಜ್ಯೋತಿ ಅವರ ಪುತ್ರಿ ಶಾಲಿನಿ ಗಡಿ ಜಿಲ್ಲೆಗೆ ಮಾದರಿ ಆಗಿರುವ ಗ್ರಾಮೀಣ ಭಾಗದ ಪ್ರತಿಭಾನ್ವಿತ ವಿದ್ಯಾರ್ಥಿನಿ.
ಸರ್ಕಾರಿ ಕಾಲೇಜು ಎಂದರೆ ಮೂಗು ಮುರಿಯುವ ಕಾಲದಲ್ಲಿ ಪ್ರಾಥಮಿಕ ಶಿಕ್ಷಣವನ್ನು ತನ್ನೂರಾದ ಹೊಡರಬಾಳು ಸರ್ಕಾರಿ ಶಾಲೆಯಲ್ಲಿ ಪೂರೈಸಿ, ಪ್ರೌಢ ಶಿಕ್ಷಣ ಹಾಗೂ ಕಾಲೇಜಿನ ಓದಿಗೆ ಕೊಳ್ಳೇಗಾಲ ಪಟ್ಟಣದ ಸರ್ಕಾರಿ ಎಸ್.ವಿ.ಕೆ ಬಾಲಕೀಯರ ಕಾಲೇಜಿಗೆ ಸೇರಿ ಶಿಕ್ಷಣ ಪಡೆದಿದ್ದಾಳೆ. ಸರ್ಕಾರಿ ಕಾಲೇಜಿನ ಮಕ್ಕಳು ಯಾರಿಗೂ ಕಡಿಮೆ ಇಲ್ಲ ಎಂಬುದನ್ನು ಸಾಬೀತು ಪಡಿಸಿರುವ ಈಕೆ, ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಶ್ರೇಣೆಯಲ್ಲಿ ತೇರ್ಗಡೆಯಾಗಿ ಎಲ್ಲರಿಗೂ ಮಾದರಿಯಾಗಿದ್ದಾಳೆ. ಕಲಾ ವಿಭಾಗದಲ್ಲಿ 600 ಕ್ಕೆ 573(95.5 %) ಅಂಕ ಪಡೆದುಕೊಂಡಿದ್ದು, ಮಾತೃ ಭಾಷೆಯಲ್ಲಿ 91, ಇಂಗ್ಲಿಷ್ 95, ಇತಿಹಾಸ 95, ಅರ್ಥಶಾಸ್ತ್ರ98 , ಭೂಗೋಳ ಶಾಸ್ತ್ರ 100, ರಾಜ್ಯ ಶಾಸ್ತ್ರದಲ್ಲಿ 98 ಅಂಕಗಳನ್ನು ಪಡೆಯುವ ಮೂಲಕ ಚಾಮರಾಜನಗರ ಜಿಲ್ಲೆಗೆ ಟಾಪರ್ ಆಗಿ ಹೊರ ಹೊಮ್ಮಿದ್ದಾಳೆ.
ತಂದೆ ವೀರಭದ್ರಸ್ವಾಮಿ ಕೃಷಿಕರಾಗಿದ್ದು, ತಾಯಿ ಜ್ಯೋತಿ ಗೃಹಿಣಿ. ಓದಿನ ಜೊತೆಗೆ ಬಿಡುವಿನ ವೇಳೆ ಅಪ್ಪ ಅಮ್ಮನೊಂದಿಗೆ ಜಮೀನಿಗೆ ಹೋಗಿ ಕೃಷಿ ಚಟುವಟಿಕೆಯಲ್ಲೂ ಭಾಗವಹಿಸಿ ಸಹಾಯ ಮಾಡುತ್ತಿದ್ದ ಶಾಲಿನಿ, ಮನೆಯ ಕೆಲಸಗಳಲ್ಲೂ ಅಮ್ಮನಿಗೆ ನೆರವಾಗುತ್ತಿದಳು. ಓದಿನ ವಿಷಯದಲ್ಲಿ ಎಂದೂ ನಿಷ್ಠೆ ಬಿಡದ ಇವಳು ದಿನದ ಪಾಠ ಪ್ರವಚನಗಳನ್ನು ಅಂದಿಗಂದಿಗೆ ಓದಿಕೊಂಡು, ಉಪನ್ಯಾಸಕರು ಮಾಡಿದ ಪಾಠವನ್ನು ಮನೆಯಲ್ಲಿ ತನಗೆ ತಾನೇ ಹೇಳಿಕೊಂಡಂತೆ ರೀಕಾಲ್ ಮಾಡಿಕೊಳ್ಳುತ್ತಿದಳಂತೆ. ಖಾಸಗಿ ಮನೆ ಪಾಠಕ್ಕೂ ತೆರಳದೇ ಈ ಬಾಲಕಿ, ದಿನದ ಹೆಚ್ಚಿನ ಸಮಯವನ್ನು ಓದಿಗೆ ಮೀಸಲಿಟ್ಟು ಜಿಲ್ಲೆಗೆ ಮಾದರಿ ವಿದ್ಯಾರ್ಥಿಯಾಗಿದ್ದಾಳೆ.
ಈ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿದ ಶಾಲಿನಿ, 1ನೇ ತರಗತಿಯಿಂದಲೂ ಸರ್ಕಾರಿ ಶಾಲಾ ಮತ್ತು ಕಾಲೇಜಿನಲ್ಲೇ ವ್ಯಾಸಂಗ ಮಾಡುತ್ತಿದ್ದೇನೆ. ಪಿಯುಸಿ ಪರೀಕ್ಷೆಯಲ್ಲಿ 573 ಅಂಕ ಪಡೆದು ಜಿಲ್ಲೆಗೆ ಮೊದಲು ಬಂದಿರುವುದು ನನಗೆ ಸಂತಸ ತಂದಿದೆ. ನನ್ನ ತಂದೆ, ತಾಯಿ ಪ್ರೋತ್ಸಾಹ ಈ ಸಾಧನೆಗೆ ಕಾರಣ, ಕಾಲೇಜಿನಲ್ಲಿ ಉತ್ತಮ ಪಾಠಮಾಡಿದ ಉಪನ್ಯಾಸಕರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಫಲಿತಾಂಶ ಬಂದೊಡನೆ ಪ್ರಿನ್ಸಿಪಾಲ್ ಹಾಗೂ ಟೀಚರ್ಸ್ ನನಗೆ ಅಭಿನಂದನೆ ಕೋರಿದರು ಅವರಿಗೆ ನಾ ಚಿರರುಣಿ. ಮುಂದೆ ಹೀಗೆ ಚೆನ್ನಾಗಿ ಓದಿ ಐಎಎಸ್ ಪರೀಕ್ಷೆ ಬರೆಯುವುದು ನನ್ನ ಕನಸು ಎಂದಿದ್ದಾಳೆ ಶಾಲಿನಿ.
ತಂದೆ ಮಾತನಾಡಿ, ಮಗಳು ಪಿಯು ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದು ಜಿಲ್ಲೆಗೆ ಮೊದಲು ಬಂದಿರುವುದು ಬಹಳ ಸಂತೋಷವಾಗಿದೆ. ನಾವು ಕನಸಲ್ಲೂ ಇಂತಹ ಸಾಧನೆ ಮಾಡುತ್ತಾಳೆ ಎಂದುಕೊಂಡಿರಲಿಲ್ಲ. ಮಗಳನ್ನು ಚೆನ್ನಾಗಿ ಓದಿಸಬೇಕು ಎಂಬ ಆಸೆ ಇದೆ. ಬಿಡುವಿನ ಸಮಯದಲ್ಲಿ ನನ್ನ ಕೃಷಿ ಕೆಲಸಕ್ಕೂ ಶಾಲಿನಿ ಸ್ಪಂದನೆ ನೀಡಿದ್ದಾಳೆ. ಮುಂದೆಯೂ ಉನ್ನತ ಹುದ್ದೆಗೆ ಸೇರಿಸುವ ಆಸೆ ಇದೆ ಎಂದರು.
ತಾಯಿ ಜ್ಯೋತಿ ಮಾತನಾಡಿ, ನನ್ನ ಮಗಳು ಹೆಚ್ಚಿನ ಅಂಕಗಳಿಸಿರುವುದು ಖುಷಿ ತಂದಿದೆ ಇನ್ನು ಮುಂದೆ ಅವಳಿಗೆ ಕೆಲಸ ಜಾಸ್ತಿ ಕೊಡದೇ ಹೆಚ್ಚಿನ ಓದಿಗೆ ಅವಕಾಶ ಮಾಡಿಕೊಡುತ್ತೇವೆ ಎಂದಿದ್ದಾರೆ.