ಚಾಮರಾಜನಗರ: ಹುಂಡಿಯಲ್ಲಿ ಸಂಗ್ರಹವಾಗುತ್ತಿದ್ದ ಹಣದಿಂದ ಗಮನ ಸೆಳೆಯುತ್ತಿದ್ದ ಮಲೆ ಮಾದಪ್ಪ ಈಗ ಮತ್ತಷ್ಟು ಶ್ರೀಮಂತನಾಗಿದ್ದು, ಹರಕೆ ಕೂದಲಿನ ಹರಾಜಿನಿಂದ ಬರೋಬ್ಬರಿ 1.49 ಕೋಟಿ ರೂ. ಸಂಗ್ರಹವಾಗಿದೆ.
ನಾಡಿನ ಪ್ರಮುಖ ದೇಗುಲಗಳಲ್ಲಿ ಒಂದಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಹರಕೆ ಕೂದಲಿನ ಬಿಡ್ ನಡೆದಿದ್ದು, ಪ್ರತಿ ಕೆಜಿಗೆ 15,535 ರೂ. ನಂತೆ 4595 ಕೆಜಿ ತುಂಡು ಕೂದಲು, 951 ಕೆಜಿ ಉದ್ದ ಕೂದಲು ಮಾರಾಟವಾಗಿದ್ದು ಬರೋಬ್ಬರಿ 1,49,40,391 ರೂ. ಆದಾಯ ಬಂದಿದೆ.
ಈ ಕುರಿತು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಪ್ರತಿಕ್ರಿಯಿಸಿ, ಕಳೆದ ವರ್ಷಕ್ಕಿಂತ ಈ ವರ್ಷ ಪ್ರತಿ ಕೆಜಿಗೆ 8135 ರೂ. ಹೆಚ್ಚಿನ ಲಾಭ ಬಂದಿದ್ದು ಒಟ್ಟು ಹಣ ಇಷ್ಟು ಸಂಗ್ರಹವಾಗಿರುವುದು ಸಾರ್ವಕಾಲಿಕ ದಾಖಲೆಯಾಗಿದೆ, ಇನ್ನು, ಈ ಮುಡಿ ಕೂದಲು 99 ದಿನಗಳಲ್ಲಿ ಸಂಗ್ರಹವಾಗಿತ್ತು ಎಂದು ತಿಳಿಸಿದ್ದಾರೆ.