ಚಾಮರಾಜನಗರ: ಬಿಳಿಗಿರಿರಂಗನ ಬೆಟ್ಟಕ್ಕೆ ಯಾತ್ರಾರ್ಥಿಗಳು, ಪ್ರವಾಸಿಗರು ಬರುತ್ತಿರುವುದರಿಂದ ಆತಂಕಗೊಂಡ ಸೋಲಿಗರು ಹಾಗೂ ಸ್ಥಳೀಯರು ಕೆಎಸ್ಆರ್ಟಿಸಿ ಬಸ್ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೂರದ ಊರುಗಳಿಂದ ಕೆಎಸ್ಆರ್ಟಿಸಿ ಬಸ್ ಮೂಲಕ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟಕ್ಕೆ ಯಾತ್ರಾರ್ಥಿಗಳು, ಪ್ರವಾಸಿಗರು ಬರುತ್ತಿರುವುದರಿಂದ ಭೀತಿಗೊಳಗಾಗಿರುವ ಸೋಲಿಗರು ಕೆಎಸ್ಆರ್ಟಿಸಿ ಬಸ್ ನಲ್ಲಿ ಕೇವಲ ಸ್ಥಳೀಯರನ್ನು ಮಾತ್ರ ಹತ್ತಿಸಬೇಕು. ಬೇರೆಯವರನ್ನು ಯಾವುದೇ ಕಾರಣಕ್ಕೂ ಹತ್ತಿಸಕೂಡದು ಎಂದು ರಸ್ತೆ ತಡೆದು ಒತ್ತಾಯಿಸಿದ್ದಾರೆ.
ಜಿಲ್ಲೆಯ ಪ್ರವಾಸಿತಾಣಗಳಿಗೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದ್ದರೂ, ಧಾರ್ಮಿಕ ಕೇಂದ್ರಗಳಿಗೆ ಅವಕಾಶ ನೀಡಿತ್ತು. ಆದರೆ, ಬೆಟ್ಟಕ್ಕೆ ಪ್ರವಾಸಿಗರು ಕೆಎಸ್ಆರ್ಟಿಸಿ ಬಸ್ ಮೂಲಕ ಬರುತ್ತಿದ್ದಾರೆ. ಇದರಿಂದ ಸೋಲಿಗರು ಆತಂಕಗೊಂಡಿದ್ದು, ಪ್ರವಾಸಿಗರೊಟ್ಟಿಗೆ ಭಕ್ತರನ್ನೂ ಬೆಟ್ಟಕ್ಕೆ ನಿರ್ಬಂಧಿಸುವಂತೆ ಆಗ್ರಹಿಸಿದ್ದಾರೆ.