ಚಾಮರಾಜನಗರ/ಕೊಳ್ಳೇಗಾಲ: ಕೊರೊನಾ ವೈರಸ್ ಹರಡುವ ಆತಂಕದಿಂದ ಪರ ಊರುಗಳಿಂದ ಬರುವವರಿಗೆ, ಅಪರಿಚಿತರಿಗೆ ಜಿಲ್ಲೆಯ ಹಳ್ಳಿಗಳು ಪ್ರವೇಶ ನಿರಾಕರಿಸುತ್ತಿವೆ. ಕೋವಿಡ್ ಟೆಸ್ಟ್ ಮಾಡಿಸಿಕೊಂಡ ಬಳಿಕವೇ ಗ್ರಾಮಕ್ಕೆ ಬರಬೇಕೆಂಬ ಕಟ್ಟಾಜ್ಞೆ ಹೊರಡಿಸಿವೆ.
ಜಿಲ್ಲೆಯ ಕಂದಹಳ್ಳಿ, ಕೃಷ್ಣಾಪುರ, ಕಂದಹಳ್ಳಿ, ಬಂಡಿಗೆರೆ, ಬಮೂಕನಪಾಳ್ಯ, ವೈ.ಕೆ.ಮೋಳೆ, ಹಳೇ ಹಂಪಾಪುರ, ಉಪ್ಪಿನ ಮೋಳೆ ಗ್ರಾಮಗಳು ಸೇರಿದಂತೆ ಹಲವು ಊರುಗಳು ಸ್ವಯಂ ಲಾಕ್ಡೌನ್ ವಿಧಿಸಿಕೊಂಡಿವೆ.
ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ ಸ್ವಗ್ರಾಮ ಉಪ್ಪಿನಮೋಳೆ, ಹನೂರು ಶಾಸಕ ಆರ್.ನರೇಂದ್ರ ಸ್ವಗ್ರಾಮ ದೊಡ್ಡಿಂದುವಾಡಿಯಲ್ಲಿ ವ್ಯಾಪಾರ ವಹಿವಾಟಿಗೆ ಸಮಯ ನಿಗದಿ ಮಾಡಿಕೊಂಡು ದೂರದ ಊರುಗಳಿಂದ ಬರುವವರ ಮೇಲೆ ಹದ್ದಿನ ಕಣ್ಣಿಟ್ಟಿವೆ.
ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಟೋ ಚಾಲಕರಿದ್ದು, ಯಾರೂ ಕೂಡ ಗುಂಡ್ಲುಪೇಟೆ ಕಡೆಗೆ ಹೋಗಬಾರದೆಂದು ನಾಯಕ ಸಮುದಾಯ ಡಂಗೂರ ಸಾರಿಸಿದೆ.
ಕೊಳ್ಳೇಗಾಲ ತಾಲೂಕಿನ ಹಲವು ಗ್ರಾಮಗಳ ಜನರು ಪರ ಊರುಗಳಿಂದ ಮುಖ್ಯವಾಗಿ ಬೆಂಗಳೂರಿನಿಂದ ಬರುವವರಿಗೆ ನಿರ್ಬಂಧ ಹೇರಿದ್ದು, ತಪ್ಪಿ ಬಂದವರಿಗೆ ₹ 10 ಸಾವಿರ ದಂಡ ವಿಧಿಸುವಂತೆ ಗೌಪ್ಯ ಸಭೆ ನಡೆಸಿ ತೀರ್ಮಾನ ಮಾಡಿದ್ದಾರೆ. ತಾಲೂಕಿನ ಮುಳ್ಳೂರು, ಶಂಕನಪುರ, ಹಂಪಾಪುರ, ಹರಳೆ, ದಾಸನಪುರ, ಸತ್ತೇಗಾಲ ಗ್ರಾಮಗಳಿಗೆ ಪ್ರವೇಶ ನಿರಾಕರಣೆ ಮಾಡಲಾಗಿದೆ.
ಹಸಿರು ವಲಯವಾಗಿದ್ದ ಚಾಮರಾಜನಗರದಲ್ಲಿ ಇದೀಗ 114 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಈಗ ಮತ್ತೆ ಬೆಂಗಳೂರು ಸೇರಿ ಹಲವು ನಗರಗಳಿಂದ ಜಿಲ್ಲೆಗೆ ಜನ ಪ್ರವೇಶಿಸುತ್ತಿದ್ದಾರೆ. ಹೀಗಾಗಿ ಗ್ರಾಮದ ಮುಖಂಡರು ಕೈಗೊಂಡಿರುವ ಈ ನಿರ್ಧಾರಕ್ಕೆ ಮೆಚ್ಚುಗೆಯೂ ವ್ಯಕ್ತವಾಗುತ್ತಿದೆ. ಜಿಲ್ಲಾಡಳಿತ ಸಂಜೆ 4ರ ಬಳಿಕ ಲಾಕ್ಡೌನ್ ಮಾಡಿದರೆ, ಹಲವು ಗ್ರಾಮಗಳು ಸೀಲ್ ಡೌನ್ ಮಾಡಿಕೊಳ್ಳುವ ಮೂಲಕ ಜಿಲ್ಲಾಡಳಿತಕ್ಕಿಂತ ಒಂದು ಹೆಜ್ಜೆ ಮುಂದಡಿಯಿಟ್ಟಿವೆ.