ಚಾಮರಾಜನಗರ: ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕವಾಗಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್ ಜಿಲ್ಲೆಯಲ್ಲಿ ಪ್ರಗತಿಯ ನಿರೀಕ್ಷೆ ಹಾಗೂ ಸಮಸ್ಯೆಗಳಿಗೆ ಸ್ಪಂದಿಸುವ ನಿರೀಕ್ಷೆಗಳನ್ನು ಮೂಡಿಸಿದ್ದಾರೆ.
ಉಸ್ತುವಾರಿ ಸಚಿವರಾದ ಬಳಿಕ ಬುಧವಾರ ಸಚಿವರು ಗ್ರೂಪ್ ರಚಿಸಿದ್ದು, ಜಿಲ್ಲೆಯ ಡಿಸಿ, ಎಸ್ಪಿ, ಸಿಇಒ, ಎಸಿ, ಶಾಸಕರನ್ನು ಸೇರಿಸಿಕೊಂಡು ಜಿಲ್ಲೆಯಲ್ಲಿನ ನಿತ್ಯ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದರು.
ಜಿಲ್ಲೆಯ ಶಾಸಕರು, ಅಧಿಕಾರಿಗಳು ಸಮಸ್ಯೆಗಳನ್ನು ಪ್ರತಿದಿನ ಚರ್ಚಿಸಿ, ಪರಿಹಾರ ಕಂಡುಕೊಳ್ಳಲಿದ್ದೇವೆ. ಈ ಮೂಲಕ ಸಮಸ್ಯೆಗಳು ಕೂಡ ಆಗಲಿದೆ ಎಂದು ಮೊದಲ ಬಾರಿಗೆ ಜಿಲ್ಲಾ ಪ್ರವಾಸ ಕೈಗೊಂಡು ನಂತರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಚಾಮರಾಜನಗರ ಜಿಲ್ಲೆ ಉಸ್ತುವಾರಿ ಕೊಟ್ಟಿರುವುದು ಒಂದು ಸವಾಲಿನ ಕೆಲಸವಾಗಿದ್ದು, ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ಚಾಮರಾಜನಗರದಲ್ಲಿ ಜನಸ್ಪಂದನ ಕಾರ್ಯಕ್ರಮ ಮಾಡುತ್ತೇನೆ ಮತ್ತು ಜಿಲ್ಲೆಯ ಯಾವುದಾದರೂ ಒಂದು ಶಾಲೆಯಲ್ಲಿ ವಾಸ್ತವ್ಯ ಹೂಡುವ ಜೊತೆಗೆ ಮುಂದಿನ ವಾರವೇ ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ದೊಡ್ಡಾನೆಗೆ ಭೇಟಿ ನೀಡುತ್ತೇನೆ ಎಂದು ತಿಳಿಸಿದರು.
ಕಂದಾಯ ಭೂಮಿ ಮತ್ತು ಅರಣ್ಯ ಭೂಮಿ ನಡುವೆ ತಿಕ್ಕಾಟವಿದ್ದು, ಇದನ್ನು ಪರಿಹರಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದೊಂದಿಗೆ ಚರ್ಚಿಸಿ, ಶೀಘ್ರ ರಸ್ತೆ ಕಾಮಗಾರಿ ವಿಳಂಬ ಸರಿಪಡಿಸುವುದಾಗಿ ಭರವಸೆ ನೀಡಿದರು.