ಚಾಮರಾಜನಗರ : ವರನಟ ಡಾ. ರಾಜ್ ಕುಮಾರ್ ಅವರ ತವರೂರಾದ ತಮಿಳುನಾಡಿನ ತಾಳವಾಡಿ ಸಮೀಪದ ದೊಡ್ಡಗಾಜನೂರಿನಲ್ಲಿ ನಟ ಪುನೀತ್ ನಿಧನಕ್ಕೆ ಜನರು ಕಂಬನಿ ಮಿಡಿಯುತ್ತಿದ್ದು, ಊರಲ್ಲಿ ನೀರವ ಮೌನ ಆವರಿಸಿದೆ.
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ರವರ ಆರೋಗ್ಯ ಸ್ಥಿತಿ ಗಂಭೀರ ಎಂದು ಮಾಧ್ಯಮಗಳಲ್ಲಿ ವರದಿ ಬಿತ್ತರವಾಗುತ್ತಿದ್ದಂತೆ ನೂರಾರು ಅಭಿಮಾನಿಗಳು ಬೆಂಗಳೂರಿಗೆ ತೆರಳಿದ್ದಾರೆ.
ಇನ್ನು ದೊಡ್ಡ ಗಾಜನೂರಿನಲ್ಲಿ ವಾಸವಿರುವ ಅಣ್ಣಾವ್ರ ಸಹೋದರಿ ಮತ್ತು ಮಕ್ಕಳು ಮಧ್ಯಾಹ್ನ 12.30ಕ್ಕೆ ಬೆಂಗಳೂರಿಗೆ ತೆರಳಿದ್ದು, ತಾಳವಾಡಿ ಪೊಲೀಸರು ಮನೆಗೆ ಬಿಗಿ ಭದ್ರತೆ ಒದಗಿಸಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಡಾ.ರಾಜ್ ಕುಮಾರ್ ಅವರನ್ನು ಅಣ್ಣಾವ್ರ ಎಂದು ಕರೆದರೆ, ದೊಡ್ಡ ಗಾಜನೂರಿನ ಜನರು ಮಾತ್ರ ಇಂದಿಗೂ ಮುತ್ತಣ್ಣ ಎಂದೇ ಕರೆಯುವುದು ರೂಢಿ.
ಶಿವಣ್ಣ, ರಾಘಣ್ಣ ಮತ್ತು ಅಪ್ಪು ಅವರನ್ನು ಮುತ್ತಣ್ಣನ ಮಕ್ಕಳು ಎನ್ನುವ ಜನರು ರಾಜ್ಗೆ ತೋರುತ್ತಿದ್ದ ಗೌರವ, ಆದರವನ್ನೇ ಮಕ್ಕಳಿಗೂ ತೋರುತ್ತಿದ್ದ ಜನರು ಈಗ ಪುನೀತ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
ನೆಚ್ಚಿನ ನಟನ ನಿಧನ ಸುದ್ದಿ ಕೇಳಿ ಚಾಮರಾಜನಗರದಲ್ಲಿ ಅವರ ಅಪಾರ ಸಂಖ್ಯೆಯ ಅಭಿಮಾನಿಗಳು ತೀವ್ರ ಆಘಾತಕ್ಕೊಳಗಾಗಿದ್ದಾರೆ.
ಇದನ್ನೂ ಓದಿ: ಕರುನಾಡ ರಾಜಕುಮಾರ ಪುನೀತ್ ರಾಜ್‍ಕುಮಾರ್ ವಿಧಿವಶ.. ಅಭಿಮಾನಿಗಳ ನೆಚ್ಚಿನ ಅಪ್ಪು ಇನ್ನಿಲ್ಲ