ಚಿಕ್ಕಮಗಳೂರು/ಹಾಸನ: ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದೆ. ನಿರಂತರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು, ಮಳೆರಾಯನ ಆರ್ಭಟದಿಂದ ನೆರೆ ಪೀಡಿತ ಪ್ರದೇಶದ ಜನರಿಗೆ ಮತ್ತೆ ಅತಂಕ ಶುರುವಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗ ಹಾಗೂ ನಗರ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಮಳೆಯನ್ನು ನೋಡಿ ಮತ್ತೆ ಮಲೆನಾಡಿನ ಜನರು ಬೆಚ್ಚಿಬೀಳುತ್ತಿದ್ದಾರೆ. ಚಿಕ್ಕಮಗಳೂರು ನಗರ, ಮೂಡಿಗೆರೆ, ಕೊಟ್ಟಿಗೆಹಾರ, ಚಾರ್ಮಾಡಿ ಘಾಟಿ, ಬಣಕಲ್, ಬಾಳೂರು, ಜಾವಳಿ, ಕಳಸ, ಶೃಂಗೇರಿ, ಕೊಪ್ಪ ಭಾಗದಲ್ಲಿಯೂ ಮಳೆಯಾಗುತ್ತಿದೆ. ನಿರಂತರ ಮಳೆಯ ಕಾರಣ ಜನಜೀವನ ಅಸ್ತವ್ಯಸ್ತವಾಗಿದ್ದು, ಚಾರ್ಮಾಡಿ ಘಾಟಿ ರಸ್ತೆಯಲ್ಲಿ ವಾಹನ ಸವಾರರು ಪರದಾಡುವಂತಾಯಿತು.
ಹಾಸನ ಜಿಲ್ಲೆಯಲ್ಲೂ ಸಹ ವರುಣ ತಂಪೆರೆದಿದ್ದಾನೆ. ಹಾಸನ, ಸಕಲೇಶಪುರ, ಆಲೂರು, ಬೇಲೂರು, ಅರಕಲಗೂಡು ಹಾಗೂ ಅರಸೀಕೆರೆ ತಾಲೂಕಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಗುಡುಗು ಸಹಿತ ಮಳೆಯಾಗುತ್ತಿರುವ ಕಾರಣ ನಗರದ ಪ್ರಮುಖ ಬಿಎಂ ರಸ್ತೆ, ಸಾಲಗಾಮೆ ರಸ್ತೆ, ಆರ್.ಸಿ ರಸ್ತೆ ಹಾಗೂ ಬಸೆಟ್ಟಿ ಕೊಪ್ಪಲು ರಸ್ತೆಗಳು ನೀರಿನಿಂದ ಜಲಾವೃತಗೊಂಡಿವೆ.