ಚಾಮರಾಜನಗರ: ಸುರಿಯುತ್ತಿವ ಭಾರೀ ಮಳೆಗೆ ಮಲೆಮಹದೇಶ್ವರ ಬೆಟ್ಟದಿಂದ ತಮಿಳುನಾಡಿಗೆ ಹೋಗುವ ಮಾರ್ಗದಲ್ಲಿ ರಸ್ತೆಯ ಒಂದು ಬದಿ ಹಾಗೂ ಗುಡ್ಡವೊಂದು ಕುಸಿದು ವಾಹನಗಳು ಸಂಚಾರಕ್ಕೆ ತಡೆಯುಂಟಾಗಿದ್ದು, ಪೊಲೀಸರು ಜೆಸಿಬಿ ಮೂಲಕ ಮಣ್ಣಿನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಇನ್ನು ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೀರು ನುಗ್ಗಿದ್ದು, ವೈದ್ಯ ಸಿಬ್ಬಂದಿ ಹಾಗೂ ರೋಗಿಗಳು ಪರದಾಡುವಂತಾಗಿದೆ. ಇನ್ನಾದರೂ ಆರೋಗ್ಯ ಇಲಾಖೆ ಎಚ್ಚೆತ್ತು ಆಸ್ಪತ್ರೆಯ ಅನಾರೋಗ್ಯ ಸರಿಪಡಿಸಬೇಕಿದೆ ಎಂದು ಗ್ರಾಪಂ ಸದಸ್ಯ ಮಹದೇವಪ್ರಸಾದ್ ಒತ್ತಾಯಿಸಿದ್ದಾರೆ.
ಹನೂರು ತಾಲೂಕಿನ ಮಾರ್ಟಳ್ಳಿಯಲ್ಲಿ ರಸ್ತೆ ತೀರಾ ಹದಗೆಟ್ಟಿದ್ದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ರಸ್ತೆಯಲ್ಲೇ ನಾಟಿ ಮಾಡಿ ಸ್ಥಳೀಯ ಆಡಳಿತ ವಿರುದ್ಧ ಕಿಡಿಕಾರಿದ್ದಾರೆ.