ಚಾಮರಾಜನಗರ: ಚಾಮರಾಜನಗರ ಮೆಡಿಕಲ್ ಕಾಲೇಜಿನಲ್ಲಿ ನಡೆದಿದ್ದ ರ‍್ಯಾಗಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಮಂದಿ ವಿದ್ಯಾರ್ಥಿಗಳನ್ನು ತಾತ್ಕಾಲಿಕವಾಗಿ ಹಾಸ್ಟೆಲ್‌ನಿಂದ ಡಿಬಾರ್ ಮಾಡಲಾಗಿದೆ ಎಂದು ಉನ್ನತ ಮೂಲಗಳು ಈಟಿವಿ ಭಾರತಕ್ಕೆ ತಿಳಿಸಿವೆ.
ಬುಧವಾರ ಕಾಲೇಜಿನಲ್ಲಿ ರ್ಯಾಗಿಂಗ್ಗೆ ಸಂಬಂದಿಸಿದಂತೆ ಪೊಲೀಸರು, ಪ್ರಾಧ್ಯಾಪಕರು ಒಳಗೊಂಡ ಸಭೆಯಲ್ಲಿ ರ‍್ಯಾಗಿಂಗ್ ಮಾಡಿದ 7 ಮಂದಿ ವಿದ್ಯಾರ್ಥಿಗಳನ್ನು ಹಾಸ್ಟೆಲಿನಿಂದ ಹೊರಗಟ್ಟಿದ್ದು ರ‍್ಯಾಗಿಂಗ್ ತಡೆಗಾಗಿ ಮೂರು ತಾಸು ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ಆಯೋಜಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.
![ragging in a college in chamarajanagara medical college](https://etvbharatimages.akamaized.net/etvbharat/prod-images/kn-cnr-06-raging-av-ka10038_31032021211919_3103f_1617205759_966.jpeg)
ವಿದ್ಯಾರ್ಥಿಗಳ ಮೇಲೆ ಯಾವುದೇ ಕಠಿಣ ಕ್ರಮಗಳನ್ನು ಕೈಗೊಳ್ಳದಂತೆ ಪಾಲಕರು ಮನವಿ ಮಾಡಿದ ಹಿನ್ನೆಲೆಯಲ್ಲಿ ಹಾಗೂ ಭವಿಷ್ಯದಲ್ಲಿ ಈ ರೀತಿ ಘಟನೆಗಳು ಮರುಕಳಿಸಿದಂತೆ ತಪ್ಪೊಪ್ಪಿಗೆ ನೀಡಿದ್ದರಿಂದ ಕಾಲೇಜಿನಿಂದ ಡಿಬಾರ್ ಮಾಡಿಲ್ಲ ಎನ್ನಲಾಗಿದೆ.
ಕೆಲವು ದಿನಗಳ ಹಿಂದೆಯಷ್ಟೇ ತುಮಕೂರಿನ ಕಿರಿಯ ವಿದ್ಯಾರ್ಥಿವೋರ್ವನ ಮೇಲೆ ಹಿರಿಯ ವಿದ್ಯಾರ್ಥಿಗಳು ಬಟ್ಟೆ ಬಿಚ್ಚಿಸಿ, ನೃತ್ಯ ಮಾಡಿಸಿ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದ ಆರೋಪ ಕೇಳಿಬಂದಿತ್ತು.