ಚಾಮರಾಜನಗರ: ಪ್ರಸಿದ್ಧ ತೀರ್ಥ ಕ್ಷೇತ್ರ ಮಲೆಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡುವವರು ರಸ್ತೆ ಬದಿಗಳಲ್ಲಿ ರಾಶಿ-ರಾಶಿ ಬಿಸಾಡುವ ಕಸ ಒಂದೆಡೆಯಾದರೇ ಕಾಡಂಚಲ್ಲಿ ಗುಂಡು ಹಾಕುವ ಪೋಕರಿಗಳು ಮತ್ತೊಂದೆಡೆ, ಇನ್ನೂ ದಾರಿ ಮಧ್ಯೆ ವಾಹನ ನಿಲ್ಲಿಸಿ ಕೋತಿಗಳಿಗೆ ಆಹಾರ ನೀಡುವ ಚೇಷ್ಟೆ ಮಿತಿ ಮೀರಿದ್ದು ಅವೆಲ್ಲದಕ್ಕೂ ಬ್ರೇಕ್ ಸದ್ಯದಲ್ಲೇ ಬೀಳಲಿದೆ.
ಹೌದು, ಪ್ಲಾಸ್ಟಿಕ್ ರಾಕ್ಷಸ, ಗುಂಡು ಪ್ರಿಯರ ಆಟಾಟೋಪಗಳಿಗೆಲ್ಲಾ ಕಡಿವಾಣ ಹಾಕಲು ಮಲೆಮಹದೇಶ್ವರ ವನ್ಯಜೀವಿಧಾಮವು 24x7 ಅರಣ್ಯ ಗಸ್ತನ್ನು ಹೆದ್ದಾರಿಯಲ್ಲಿ ನಿಯೋಜಿಸಲು ಚಿಂತಿಸಿದ್ದು ಕೌದಳ್ಳಿಯಿಂದ ಪಾಲಾರ್ವರೆಗೆ ಶೀಘ್ರವೇ ಪ್ಯಾಟ್ರೋಲಿಂಗ್ ನಡೆಸಲಿದ್ದಾರೆ.
ಕೌದಳ್ಳಿ, ರಾಮಾಪುರ, ಪೊನ್ನಾಚಿ ಕ್ರಾಸ್, ಮಲೆಮಹದೇಶ್ವರ ಬೆಟ್ಟ, ಪಾಲಾರ್ ಗಡಿವರೆಗೆ ರೈಫಲ್ ಸಮೇತ ಸಿಬ್ಬಂದಿ ಗಸ್ತು ನಡೆಸಲಿದ್ದು ಪರಿಸರಕ್ಕೆ ಧಕ್ಕೆ ತರುತ್ತಿರುವುದು ಕಂಡುಬಂದರೇ ಸ್ಥಳದಲ್ಲೇ ದಂಡ ವಿಧಿಸಿ ಮತ್ತೆಂದೂ ಕಾನೂನುಗಳನ್ನು ಉಲ್ಲಂಘಿಸದಂತೆ ಎಚ್ಚರಿಕೆ ನೀಡಲಿದ್ದಾರೆ.
![cleaning](https://etvbharatimages.akamaized.net/etvbharat/prod-images/kn-cnr-03-24-fine-patrol-7202614_24062019174509_2406f_1561378509_851.jpg)
ಇತ್ತೀಚೆಗಷ್ಟೆ ತಾಳಬೆಟ್ಟದಿಂದ ಮಲೆಮಹದೇಶ್ವರ ಬೆಟ್ಟದವರೆಗಿನ ಪ್ಲಾಸ್ಟಿಕ್ ಸಂಗ್ರಹಿಸಿದಾಗ 500 ಕೆ.ಜಿಗೂ ಹೆಚ್ಚು ಪ್ಲಾಸ್ಟಿಕ್ ಸಂಗ್ರಹವಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಕುರಿತು ಈಟಿವಿಯೊಂದಿಗೆ ಡಿಎಫ್ಒ ಏಡುಕುಂಡಲು ದೂರವಾಣಿ ಮೂಲಕ ಪ್ರತಿಕ್ರಿಯಿಸಿ, ಇನ್ನೊಂದು ವಾರದಲ್ಲಿ ಹೈವೇ ಪ್ಯಾಟ್ರೋಲಿಂಗ್ ಪ್ರಾರಂಭವಾಗಲಿದ್ದು ಕಾಡಿನ ಮಧ್ಯೆ ಸೆಲ್ಫಿ ತೆಗೆದುಕೊಳ್ಳುವುದು, ಕೋತಿ ಮತ್ತಿತ್ತರ ಪ್ರಾಣಿಗಳಿಗೆ ಆಹಾರ ನೀಡುವುದು, ಪ್ಲಾಸ್ಟಿಕ್ ಬಾಟಲಿಗಳನ್ನು ರಸ್ತೆಬದಿ ಎಸೆಯುವುದು ಕಂಡುಬಂದಲ್ಲಿ ಸ್ಥಳದಲ್ಲೇ 500-600 ರೂ.ವರೆಗೂ ದಂಡ ವಿಧಿಸಲಾಗುವುದು. ರಸ್ತೆ ಬದಿ ಬೈಕ್, ಕಾರುಗಳನ್ನು ನಿಲ್ಲಿಸಿ ಕಾಡಂಚಲ್ಲಿ ಮದ್ಯಪಾನ ಮಾಡಿದರೇ ಹೆಚ್ಚು ಮೊತ್ತದ ದಂಡ ವಿಧಿಸಿ ನಮ್ಮ ಸಿಬ್ಬಂದಿಗಳು ಪರಿಸರ ಪಾಠ ಮಾಡಿ ಎಚ್ಚರಿಕೆ ನೀಡಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
![letter](https://etvbharatimages.akamaized.net/etvbharat/prod-images/kn-cnr-03-24-fine-patrol-7202614_24062019174509_2406f_1561378509_86.jpg)
ಅಮವಾಸ್ಯೆ, ಹಬ್ಬಗಳ ಸಂದರ್ಭದಲ್ಲಿ ಪರಿಸರ ಹಾನಿ ಹೆಚ್ಚು ಉಂಟಾಗುತ್ತಿದ್ದು ಪಾಲಾರ್ ಚೆಕ್ ಪೋಸ್ಟ್ ಮತ್ತು ತಾಳಬೆಟ್ಟದಲ್ಲಿ ಪ್ಲಾಸ್ಟಿಕ್ ಬಳಸದೇ ಪರಿಸರಸ್ನೇಹಿ ಬ್ಯಾಗ್ಗಳು, ವಸ್ತುಗಳನ್ನು ಬಳಸುವಂತೆ ಅರಿವು ಮೂಡಿಸುವ ಕರಪತ್ರಗಳನ್ನು ಹಂಚಲಾಗುವುದು. ಕರಪತ್ರ ಈಗಾಗಲೇ ತಯಾರಾಗಿದ್ದು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿರಲ್ಲಿದೆ, ಪ್ರಾಣಿಗಳಿಗೆ ಆಹಾರ ನೀಡದಂತೆ, ವನ್ಯಜೀವಿಗಳಿಗೆ ತೊಂದರೆ ಉಂಟು ಮಾಡದಂತೆ ಮತ್ತಷ್ಟು ಸೂಚನಾ ಫಲಕಗಳನ್ನು ಅಳವಡಿಸಲಾಗುವುದು
ಎಂದು ಏಡುಕುಂಡಲು ತಿಳಿಸಿದ್ದಾರೆ.
ದೇವರ ದರ್ಶನಕ್ಕೆಂದು ಬಂದು ಮೋಜು- ಮಸ್ತಿಯಲ್ಲಿ ತೊಡಗಿದರೇ ದಂಡ ಕಟ್ಟಬೇಕಾಗುತ್ತದೆ. ದೇಗುಲದಷ್ಟೆ ಪಾವಿತ್ರ್ಯತೆ ಇರುವ ಕಾಡನ್ನು ಉಳಿಸಬೇಕಾದ್ದು ಎಲ್ಲರ ಜವಾಬ್ದಾರಿಯಾಗಿದೆ ಎಂಬುದು ಪರಿಸರಪ್ರೇಮಿಗಳ ಮಾತಾಗಿದೆ.