ಚಾಮರಾಜನಗರ: ಅರವಳಿಕೆಯ ಹೈಡೋಸ್ನಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಆರೋಪಿಸಿರುವ ಘಟನೆ ಹನೂರಿನಲ್ಲಿ ನಡೆದಿದೆ.
ಹನೂರಿನ ಹಾಲಿನ ವ್ಯಾಪಾರಿ ಸುರೇಶ್ (42) ಮೃತಪಟ್ಟಿರುವ ದುರ್ದೈವಿ. ಇತ್ತೀಚೆಗಷ್ಟೆ ಸುರೇಶ್ ಅಪಘಾತಕ್ಕೊಳಗಾಗಿ ಎರಡು ಕಾಲಿಗೂ ಕಬ್ಬಿಣದ ರಾಡ್ ಹಾಕಿಸಿಕೊಂಡಿದ್ದರು. ಸೋಮವಾರ ರಾಡ್ ತೆಗೆಸಲು ಕೊಳ್ಳೇಗಾಲ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ಡಾ.ರಾಜಶೇಖರಮೂರ್ತಿ ಎಂಬ ವೈದ್ಯ ಅನಸ್ತೇಷಿಯಾ ನೀಡಿದ್ದಾರೆ.

ಅರವಳಿಕೆ ಚುಚ್ಚು ಮದ್ದು ನೀಡುತ್ತಿದ್ದಂತೆ ಪ್ರಹ್ಞಾಹೀನರಾಗಿದ್ದು ಕೂಡಲೇ ವೈದ್ಯರೇ ಮೈಸೂರಿನ ಆಸ್ಪತ್ರೆಗೆ ಕರೆದೊಯ್ದಿದ್ದರು. ಬಳಿಕ, ಲೋ ಬಿಪಿಯಿಂದ ಮೃತಪಟ್ಟಿದ್ದಾರೆ ಎಂದು ಸಮಜಾಯಿಷಿ ನೀಡುತ್ತಿದ್ದಾರೆ ಎಂದು ಮೃತ ವ್ಯಕ್ತಿಯ ಸಂಬಂಧಿಕರು ಆರೋಪ ಮಾಡಿದ್ದಾರೆ.
ಸೂಕ್ತ ಪರಿಹಾರ ನೀಡಿ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿ ಶವವಿಟ್ಟು ಹನೂರು ಪೊಲೀಸ್ ಠಾಣೆ ಮುಂಭಾಗ ಸಂಬಂಧಿಕರು ಪ್ರತಿಭಟಿಸುತ್ತಿದ್ದು ಬಿಗುವಿನ ವಾತಾವರಣ ನಿರ್ಮಾಣಗೊಂಡಿದೆ. ಅಲ್ಲದೆ ವೈದ್ಯರನ್ನು ಸ್ಥಳಕ್ಕೆ ಕರೆಯಿಸಿ ಕುಟುಂಬಕ್ಕೆ ನ್ಯಾಯ ಕೊಡಿಸಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ.