ಚಾಮರಾಜನಗರ: ನವರಾತ್ರಿಯಿಂದ ಬಾಂಗ್ಲಾದೇಶದಲ್ಲಿ ಅಲ್ಲಿನ ಅಲ್ಪಸಂಖ್ಯಾತರಾದ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ನಗರದಲ್ಲಿ ಹಿಂದೂ ಜಾಗರಣ ವೇದಿಕೆಯು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿತು.
ನಗರದ ಪ್ರಮುಖ ಬೀದಿಗಳು ಸೇರಿದಂತೆ ಚಾಮರಾಜೇಶ್ವರ ದೇವಸ್ಥಾನದಿಂದ ಜಿಲ್ಲಾಡಳಿತ ಭವನದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ಹಿಂದೂ ಸಂಘಟನೆ ಕಾರ್ಯಕರ್ತರು, ಬಾಂಗ್ಲಾದೇಶದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ದೌರ್ಜನ್ಯ ಹತ್ತಿಕ್ಕಲು ಭಾರತ ಸರ್ಕಾರ ಬಾಂಗ್ಲಾದೇಶದ ಮೇಲೆ ಒತ್ತಡ ಹೇರಬೇಕು. ವಿಶ್ವದ ಎಲ್ಲೇ ಹಿಂದೂ ಧರ್ಮೀಯರಿಗೆ ಅನ್ಯಾಯ, ದೌರ್ಜನ್ಯಗಳಾದಾಗ ಅವರಿಗೆ ಕಾಣುವ ಆಶಾಕಿರಣ ಭಾರತವೊಂದೇ ಎಂಬುದನ್ನು ಇಲ್ಲಿನ ಸರ್ಕಾರ ಅರಿಯಬೇಕು ಎಂದು ಆಗ್ರಹಿಸಿದರು.
ಡಿಸಿ ಕಚೇರಿಗೆ ನುಗ್ಗಿದ ಪ್ರತಿಭಟನಾಕಾರರು:
ದೌರ್ಜನ್ಯ ನಿಲ್ಲಿಸಬೇಕೆಂದು ತಮ್ಮ ಒತ್ತಾಯವನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಕ್ಕೆ ರವಾನಿಸುವ ಮನವಿ ಪತ್ರವನ್ನು ಪಡೆಯಲು ಪ್ರತಿಭಟನಾ ಸ್ಥಳಕ್ಕೆ ಡಿಸಿ ಬರದಿದ್ದರಿಂದ ರೊಚ್ಚಿಗೆದ್ದ ಪ್ರತಿಭಟನಾಕಾರರು ಪೊಲೀಸರನ್ನು ಧಿಕ್ಕರಿಸಿ ಜಿಲ್ಲಾಡಳಿತ ಭವನದ ಮೊದಲನೇ ಅಂತಸ್ತಿನಲ್ಲಿರುವ ಡಿಸಿ ಕಚೇರಿಗೆ ಮುತ್ತಿಗೆ ಹಾಕಿದರು.
ಜಿಲ್ಲಾಧಿಕಾರಿ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದ್ದು ಇದುವರೆಗೂ ಹಿಂದೂಪರ ಸಂಘಟನೆಗಳ ಮನವಿ ಪತ್ರ ಸ್ವೀಕರಿಸಲು ಅವರು ಬಂದಿಲ್ಲ. ಆದರೆ, ಬೇರೆ ಸಂಘಟನೆಗಳ ಮನವಿ ಪತ್ರವನ್ನು ಪಡೆಯುತ್ತಾರೆ. ಅಧಿಕಾರಿಗಳಾದವರು ಒಂದು ಧರ್ಮ ವಿರೋಧಿಯಾಗಿ ಕಾರ್ಯ ನಿರ್ವಹಿಸಬಾರದು ಎಂದು ಡಿಸಿ ವಿರುದ್ಧ ಪ್ರತಿಭಟನಾಕಾರರು ಕಿಡಿಕಾರಿದರು.
ವಿಡಿಯೋ ಕಾನ್ಫರೆನ್ಸ್ ಇದ್ದಿದ್ದರಿಂದ ಬರಲಾಗಲಿಲ್ಲ ಎಂದು ಸಮಜಾಯಿಷಿ ಕೊಟ್ಟರೂ ಸಮಾಧಾನಗೊಳ್ಳದ ಪ್ರತಿಭಟನಾಕಾರರು ಡಿಸಿ ಮತ್ತು ಬಾಂಗ್ಲಾದೇಶದ ವಿರುದ್ಧ ಘೋಷಣೆಗಳನ್ನು ಕೂಗುತ್ತಲೇ ತೆರಳಿದರು.