ಚಾಮರಾಜನಗರ: ಕಳೆದ ಎರಡು ದಿನಗಳ ಹಿಂದೆ ಸುರಿದ ಭಾರೀ ಗಾಳಿ ಮಳೆಗೆ ಜಿಲ್ಲೆಯ ಹಲವೆಡೆ ಬಾಳೆ ಬೆಳೆ ನೆಲಕಚ್ಚಿದ್ದು ಆದಾಯದ ನಿರೀಕ್ಷೆಯಲ್ಲಿದ್ದ ರೈತರನ್ನು ಸಂಕಷ್ಟಕ್ಕೆ ನೂಕಿದೆ.
ಗುಂಡ್ಲುಪೇಟೆ, ಹನೂರು ಹಾಗೂ ಚಾಮರಾಜನಗರ ತಾಲೂಕಿನ ವಿವಿಧೆಡೆ ಬಾಳೆ ಬೆಳೆ ಗಾಳಿಗೆ ಮುರಿದು ಬಿದ್ದಿದೆ. 10-20 ದಿನಗಳಲ್ಲಿ ಕಟಾವಿಗೆ ಬರುತ್ತಿದ್ದ ಬಾಳೆ ಮಣ್ಣು ಪಾಲಾಗಿದೆ. ಸಾಲ ಮಾಡಿ, ರಾತ್ರಿಯೆಲ್ಲಾ ಕಾವಲು ಕಾಯ್ದು ಬೆಳೆ ರಕ್ಷಿಸಿದ್ದ ರೈತರ ಹೊಟ್ಟೆಯ ಮೇಲೆ ಅಕಾಲಿಕ ಮಳೆ ಬರೆ ಎಳೆದಿದೆ.
ಹನೂರು ತಾಲೂಕಿನ ಕೌದಳ್ಳಿ ಗ್ರಾಮದ ಮಸಣಯ್ಯ ಎಂಬ ರೈತನ ಎರಡು ಎಕರೆ ಬಾಳೆ ಸಂಪೂರ್ಣ ನಾಶವಾಗಿದೆ. ಇದರಿಂದ ಅಘಾತಕ್ಕೊಳಗಾಗಿ ಕುಟುಂಬದ ಮಹಿಳೆಯೊಬ್ಬರು ಅಸ್ವಸ್ಥರಾದ ಘಟನೆಯೂ ನಡೆದಿದೆ. 2 ಲಕ್ಷ ರೂ.ಸಾಲ ಮಾಡಿ ಗುತ್ತಿಗೆ ಜಮೀನು ಪಡೆದು ಬಾಳೆ ಹಾಕಿದ್ದರು, ಇನ್ನು 15 ದಿನಗಳಲ್ಲಿ ಕಟಾವು ಮಾಡುವಷ್ಟರಲ್ಲಿ ಮಳೆ ಅವಾಂತರ ಸೃಷ್ಟಿಸಿದೆ. ಸದ್ಯ ಕಂಗಾಲಾಗಿರುವ ರೈತ ಕುಟುಂಬ ಸೂಕ್ತ ಪರಿಹಾರಕ್ಕಾಗಿ ಮನವಿ ಮಾಡಿದೆ.
ಇನ್ನು, ಹನೂರು ತಾಲೂಕಿನ ಭದ್ರಯ್ಯನಹಳ್ಳಿ ಗ್ರಾಮದ ಮುನಿಶೆಟ್ಟಿ ಎಂಬವರ 2.5 ಎಕರೆ ಬಾಳೆಯೂ ನೆಲಕಚ್ಚಿದೆ. ಚಾಮರಾಜನಗರ ತಾಲೂಕಿನ ನಲ್ಲೂರು ಜ್ಯೋತಿಗೌಡನಪುರ, ಪುತ್ತನಪುರ, ಚಂದಕವಾಡಿ ಸುತ್ತಮುತ್ತಲೂ ಬಾಳೆ ನಾಶವಾಗಿದ್ದು ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಆಗಿದೆ.