ಚಾಮರಾಜನಗರ: ರಾಜ್ಯದ ನಾಲ್ಕನೇ ಅತಿದೊಡ್ಡ ಸಮುದಾಯವಾದ ನಾಯಕ ಜನಾಂಗಕ್ಕೆ ಸಿಗಬೇಕಾದ ಪ್ರಾತಿನಿಧ್ಯ ಸಿಎಂ ಬೊಮ್ಮಾಯಿ ಸಂಪುಟದಲ್ಲಿ ಸಿಕ್ಕಿಲ್ಲ ಎಂದು ರಾಜನಹಳ್ಳಿ ಶ್ರೀಮಹರ್ಷಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಆಕ್ರೋಶ ಹೊರಹಾಕಿದರು.
ನಗರದ ವಾಲ್ಮೀಕಿ ಭವನದಲ್ಲಿ ಇಂದು ನಾಯಕ ಸಮುದಾಯದ ಸಭೆ ನಡೆಸಿ ಅವರು ಮಾತನಾಡಿದರು. ಕನಿಷ್ಠ ಮೂವರಿಗಾದರೂ ಸಚಿವ ಸ್ಥಾನ ಕೊಡಬೇಕಿತ್ತು. ಆದರೆ, ನಮ್ಮ ಸಮುದಾಯವನ್ನು ತಾತ್ಸಾರ ಮಾಡಲಾಗಿದೆ. ವಾಲ್ಮೀಕಿ ಸಮುದಾಯದಲ್ಲಿ ಒಗ್ಗಟ್ಟಿಲ್ಲ. ಚುನಾವಣೆ ವೇಳೆ ನೋಡಿಕೊಳ್ಳೋಣ ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರ ಅಂದುಕೊಂಡಿದೆ. ಇದೇ ರೀತಿ ಮುಂದುವರೆದರೆ ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸುತ್ತೇವೆ ಎಂದು ಎಚ್ಚರಿಸಿದರು.
ನಮ್ಮನ್ನು ವೋಟ್ ಬ್ಯಾಂಕಾಗಿ ಮಾಡಿಕೊಂಡಿದ್ದೀರಿ. ಆದರೆ, ವೀರಶೈವ ಸಮುದಾಯಕ್ಕೆ 8 ಸಚಿವರು, ಒಕ್ಕಲಿಗ ಸಮುದಾಯಕ್ಕೆ 7 ಸಚಿವರು, ಹಾಲುಮತ ಕುರುಬ ಸಮಾಜಕ್ಕೆ 3 ಸಚಿವ ಸ್ಥಾನಮಾನ ನೀಡಲಾಗಿದೆ. 15 ಶಾಸಕರನ್ನು ಹೊಂದಿರುವ ಪರಿಶಿಷ್ಟ ಪಂಗಡಕ್ಕೆ ಮಾತ್ರ ಒಬ್ಬರಿಗೆ ಸಚಿವ ಸ್ಥಾನ ಕೊಡಲಾಗಿದೆ. ಓರ್ವರಿಗೆ ಉಪಮುಖ್ಯಮಂತ್ರಿ, ಮೂವರಿಗೆ ಸಚಿವ ಸ್ಥಾನಮಾನ ನೀಡಬೇಕಿತ್ತು. ಚುನಾವಣೆಯಲ್ಲಿ 500, 1000 ರೂ. ಹಂಚಿ ಸರಿಮಾಡೋಣ ಎಂಬ ತಾತ್ಸಾರ ಮನೋಭಾವನೆಯಿಂದ ಹೀಗೆ ಮಾಡಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದರು.
ಕಿವಿಗೆ ಹೂವಿಟ್ಟು ಮನೆ ಸೇರಿಕೊಂಡ ಯಡಿಯೂರಪ್ಪ: ಪರಿಶಿಷ್ಟ ಪಂಗಡದ ಸಮುದಾಯದವರ ಶಿಕ್ಷಣ, ಉದ್ಯೋಗಕ್ಕಾಗಿ ಶೇ.7.5 ಮೀಸಲಾತಿ ನೀಡಬೇಕೆಂಬ ಸುಪ್ರೀಕೋರ್ಟ್ ಆದೇಶವಿದ್ದರೂ ರಾಜ್ಯ ಸರ್ಕಾರ ಮಾಡಿಲ್ಲ. ಶೇ. 7.5ರಷ್ಟು ಮೀಸಲಾತಿ ಕೊಡುವಂತೆ ಅನೇಕ ಸಲ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಎರಡು ಬಾರಿ ವಾಲ್ಮೀಕಿ ಜಾತ್ರೆಗೆ ಬಂದು ಸಮುದಾಯದವರ ಕಿವಿಗೆ ಹೂವಿಟ್ಟು ಹೋದರು ಎಂದು ಮೀಸಲಾತಿ ನೀಡದಿದ್ದಕ್ಕೆ ಮಾಜಿ ಸಿಎಂ ಬಿಎಸ್ವೈ ವಿರುದ್ಧ ಕಿಡಿಕಾರಿದರು.
ಶೇ.7.5 ಮೀಸಲಾತಿ ನೀಡಬೇಕೆಂದು ನಿವೃತ್ತ ನ್ಯಾಯಮೂರ್ತಿ ನ್ಯಾ.ನಾಗಮೋಹನ್ ದಾಸ್ ಸಮಿತಿಯು ವರದಿಯನ್ನು ಜಾರಿ ಮಾಡುವುದಾಗಿ ಬಿಎಸ್ವೈ ಭರವಸೆ ನೀಡಿದ್ದರು. ಆದರೀಗ ಅವರು ನಾಯಕ ಸಮುದಾಯವನ್ನು ಯಾಮಾರಿಸಿ ಮನೆ ಸೇರಿಕೊಂಡಿದ್ದಾರೆ. ಸರ್ಕಾರಗಳು ನಮ್ಮ ಕಿವಿ ಮೇಲೆ ಹೂ ಇಡೊದಕ್ಕೆ ಶುರು ಮಾಡಿವೆ. ಈ ಸಮುದಾಯ ಕಂಡರೆ ತಾತ್ಸರವಿದೆ. ಹೀಗೆ ಯಾಮಾರಿಸಿಕೊಂಡು ಹೋಗುತ್ತಿದ್ದರೆ, ನಾವು ಸೂಕ್ತವಾದ ನಿರ್ಧಾರ ಪ್ರಕಟಿಸಿ ಬುದ್ಧಿ ಕಲಿಸುತ್ತೇವೆ. ಮೀಸಲಾತಿ ಕೊಡುವವರೆಗೂ ಹೋರಾಟ ನಿಲ್ಲದು ಎಂದು ಎಚ್ಚರಿಸಿದರು.
2025 ರ ವರೆಗೂ ಕೊರೊನಾ ಇರಲಿದೆ. ಒಟ್ಟು 5 ಅಲೆಗಳು ಬರಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಈಗಾಗಲೇ ಎರಡು ಅಲೆಯಲ್ಲಿ ಪರೀಕ್ಷೆ ಬರೆದು ಪಾಸಾಗಿರುವ ನಾವು ಮುಂಬರುವ ಅಲೆಗಳಲ್ಲೂ ಕೋವಿಡ್ ನಿಯಮಗಳನ್ನು ಪಾಲಿಸಿ ಹೋರಾಟ ಮುಂದುವರೆಸಬೇಕು ಎಂದು ಜನರಿಗೆ ಕರೆ ನೀಡಿದರು.
ಬಿಜೆಪಿ ಮುಖಂಡ ಎಂ.ರಾಮಚಂದ್ರ ಇನ್ನಿತರ ಸಮುದಾಯ ಮುಖಂಡರು ಇದ್ದರು. ವಾಲ್ಮೀಕಿ ಸೇವಾ ಸಮಿತಿ ಸದಸ್ಯರಿಗೆ ದಂಪತಿ ಸಮೇತ ಸನ್ಮಾನ ಮಾಡಲಾಯಿತು.
ಓದಿ: ನೂತನ ಸಚಿವರಿಂದ ಯಾವುದೇ ನಿರೀಕ್ಷೆ ಸಾಧ್ಯವಿಲ್ಲ : ಸತೀಶ್ ಜಾರಕಿಹೊಳಿ