ಕೊಳ್ಳೇಗಾಲ: ಶೀಘ್ರವೇ ರಸ್ತೆ ಕಾಮಗಾರಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದ ಜನರಿಗೆ 15 ದಿನಗಳ ಒಳಗೆ ಕಾಮಗಾರಿ ಆರಂಭಿಸುವುದಾಗಿ ಹೇಳಿ ಮನವೊಲಿಸಿದ್ದ ಅಧಿಕಾರಿಗಳು ಇದೀಗ ಕಾಮಗಾರಿ ಆರಂಭಿಸದೇ ಪುನಃ ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಕೊಳ್ಳೇಗಾಲ ತಾಲೂಕಿನ ಧನಗೆರೆ ಗ್ರಾಮದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 209 ರಸ್ತೆ ವಿಸ್ತರಣೆ ಕಾಮಗಾರಿಯ ವಿಳಂಬವನ್ನು ಖಂಡಿಸಿ ಮಾ.17 ರಂದು ಇಲ್ಲಿನ ಗ್ರಾಮಸ್ಥರು ಹಾಗೂ ರೈತ ಸಂಘ ಪ್ರತಿಭಟನೆ ನಡೆಸಿದರು. ಈ ವೇಳೆ ಹೆದ್ದಾರಿ ಇಂಜಿಯರ್ಗಳು ಪ್ರತಿಭಟನಾ ಸ್ಥಳಕ್ಕೆ ಧಾವಿಸಿ 15 ದಿನದೊಳಗೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದರು. ಆದರೆ ಇಂದಿಗೆ 25 ದಿನ ಕಳೆದರು ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಾರಂಭವಾಗಿಲ್ಲ. ಹೀಗಾಗಿ ಗಡುವಿನ ಅವಧಿ ಮುಗಿದಿದ್ದರೂ ಸ್ಥಗಿತಗೊಂಡಿದ್ದ ಕಾಮಗಾರಿ ಪ್ರಾರಂಭಿಸದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಕಾಮಗಾರಿ ಪೂರ್ಣಗೊಳದ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ವಾಹನ ಸಂಚಾರದಿಂದ ಬರುವ ಧೂಳಿನಿಂದ ರಸ್ತೆ ಬದಿಯಲ್ಲಿರುವ ನಿವಾಸಿಗಳು ದಿನ ನಿತ್ಯ ಶಾಪ ಹಾಕುತ್ತಿದ್ದಾರೆ. ಧೂಳಿನ ಸಮಸ್ಯೆ ಬಗೆಹರಿಸಲು ದಿನಕ್ಕೆ ಎರಡು ಬಾರಿ ರಸ್ತೆಗೆ ನೀರು ಹಾಕಲಾಗುತ್ತಿದ್ದು, ಪರಿಣಾಮ ರಸ್ತೆಯಲ್ಲಿ ನೀರು ನಿಂತು ಕೆಸರು ಗದ್ದೆಯಾಗಿ ಮಾರ್ಪಟ್ಟಿದೆ. ಈ ಹಿನ್ನಲೆ ದಿನ ನಿತ್ಯ ಸಂಚಾರಿಗಳು ಹೈರಾಣರಾಗುತ್ತಿದ್ದು ಅಪಘಾತಕ್ಕೀಡಾಗುವ ಆತಂಕದಲ್ಲಿ ವಾಹನ ಸಂಚಾರಿಗಳು ಪ್ರಯಾಣಿಸುತ್ತಿದ್ದಾರೆ. ಹೆದ್ದಾರಿ ಅಧಿಕಾರಿಗಳ ವಿಳಂಬ ನಡೆಯು ಗ್ರಾಮಸ್ಥರಿಗೆ ಬೇಸರ ತಂದಿದೆ.
ಹೈವೇ ಪ್ರಾಜೆಕ್ಟ್ ಮ್ಯಾನೇಜರ್ ಸುರೇಂದ್ರ ರೆಡ್ಡಿ ಅಂದು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಲಿಖಿತ ಪತ್ರದ ಮೂಲಕ ಕೊಟ್ಟ ಭರವಸೆ ಹುಸಿಯಾಗಿದೆ. ತಹಶೀಲ್ದಾರ್ ಕುನಾಲ್, ನಿರ್ಗಮಿತ ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀಕಾಂತ್ ಉಪಸ್ಥಿತಿಯಲ್ಲಿ ತಾತ್ಕಾಲಿಕವಾಗಿ ಬಗೆಹರಿದಿದ್ದ ಪ್ರಕರಣ ಪುನಃ ಪ್ರತಿಭಟನೆ ಹಾದಿ ಹಿಡಿಯುವ ವಾತಾವರಣ ಕಾಣುತ್ತಿದೆ.
ಇದನ್ನೂ ಓದಿ: ವಿಮಾನ ಹಾರಾಟದ ವೇಳೆ ಜನಿಸಿದ ಮಗುವಿಗೆ ಸಿಗುತ್ತಿಲ್ಲ ಜನನ ಪ್ರಮಾಣ ಪತ್ರ