ಚಾಮರಾಜನಗರ: ಆಕ್ಸಿಜನ್ ಕೊರತೆಯಿಂದ 12 ರೋಗಿಗಳು ಸೇರಿದಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ 24 ಮಂದಿ ಕೋವಿಡ್ ಸೋಂಕಿತರು ಮೃತಪಟ್ಟಿರುವುದಾಗಿ ಜಿಲ್ಲಾ ಕೋವಿಡ್ ಆಸ್ಪತ್ರೆಯ ಮೂಲಗಳು ಮಾಹಿತಿ ನೀಡಿವೆ.
ಆಮ್ಲಜನಕ ಸಿಗದೇ ನಮ್ಮ ಸಂಬಂಧಿಕರು ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ಹೊರಗಡೆ ಸೋಂಕಿತರ ಸಂಬಂಧಿಗಳ ಆಕ್ರಂದನ ಮುಗಿಲು ಮುಟ್ಟಿದೆ. ಸಮರ್ಪಕವಾಗಿ ಆಕ್ಸಿಜನ್ ಪೂರೈಕೆಯಾಗದೇ ಐಸಿಯುನಲ್ಲಿರುವ 50ಕ್ಕೂ ಹೆಚ್ಚು ಸೋಂಕಿತರು ನರಳಾಡುತ್ತಿದ್ದಾರೆ. ಈ ಪೈಕಿ ಕೆಲವರು ವಿಡಿಯೋ ಕಾಲ್ ಮೂಲಕ ಕುಟುಂಬಸ್ಥರ ಬಳಿ ಅಳಲು ತೋಡಿಕೊಂಡಿದ್ದಾರೆ.
ನಂಜನಗೂಡಿನ ಸೋಂಕಿತರೊಬ್ಬರು ಆಕ್ಸಿಜನ್ ಕೊರತೆ ಉಂಟಾಗಿ ಮೃತಪಟ್ಟಿದ್ದು, ರಾತ್ರಿ ಆಕ್ಸಿಜನ್ ಕೊರತೆಯಿದೆ ಎಂದು ಸ್ನೇಹಿತರಿಗೆ ವಿಡಿಯೋ ಕಾಲ್ ಮಾಡಿ ಹೇಳಿದ್ದರು. ಅವರು ಇಂದು ಮುಂಜಾನೆ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.