ಚಾಮರಾಜನಗರ: ಕಾಡುಗಳ್ಳ ವೀರಪ್ಪನ್ ಸಹಚರ ಹಾಗೂ ಪಾಲಾರ್ ಬಾಂಬ್ ಸ್ಫೋಟದ ಅಪರಾಧಿ ಜ್ಞಾನಪ್ರಕಾಶ್ (69) ಶುಕ್ರವಾರ ಕ್ಯಾನ್ಸರ್ ರೋಗದಿಂದ ಸಾವನ್ನಪ್ಪಿದ್ದಾರೆ. ಹನೂರು ತಾಲೂಕಿನ ಸಂದನಪಾಳ್ಯ ಗ್ರಾಮದಲ್ಲಿ ವಾಸವಿದ್ದ ಜ್ಞಾನಪ್ರಕಾಶ್ ಮೃತಪಟ್ಟಿದ್ದಾನೆ.
ಈತ ಪಾಲಾರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಮುಖ್ಯ ಆರೋಪಿಯಾಗಿ ಗಲ್ಲು ಶಿಕ್ಷೆಗೆ ಒಳಗಾಗಿದ್ದ. ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರಿಂದ 2014ರಲ್ಲಿ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಬದಲಿಸಿತ್ತು.
ಕಳೆದ ವರ್ಷ ಮನೆಗೆ ಬಂದಿದ್ದ ಜ್ಞಾನಪ್ರಕಾಶ್: 29 ವರ್ಷ ಸೆರೆವಾಸ ಅನುಭವಿಸಿದ್ದ ಜ್ಞಾನಪ್ರಕಾಶ್ ಶ್ವಾಸಕೋಶದ ಕ್ಯಾನ್ಸರ್ ರೋಗಕ್ಕೆ ಒಳಗಾಗಿದ್ದ. ಮಾನವೀಯತೆ ಆಧಾರದಲ್ಲಿ 2022 ರ ಡಿ.20 ರಂದು ಸುಪ್ರೀಂ ಕೋರ್ಟ್ನಿಂದ ಜಾಮೀನು ಮಂಜೂರು ಮಾಡಲಾಗಿತ್ತು. ಜೀವನ ಅಂತ್ಯದಲ್ಲಿ ಮನೆ ಸೇರಿಕೊಂಡಿದ್ದ. ನಿಧನವಾದ ಜ್ಞಾನಪ್ರಕಾಶ್ಗೆ ಪತ್ನಿ, ಮಕ್ಕಳು ಇದ್ದಾರೆ. ಪಾಲಾರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದ ಸೈಮನ್, ಬಿಲ್ವೇಂದ್ರನ್ ಈಗಾಗಲೇ ಮೃತಪಟ್ಟಿದ್ದು, ವೀರಪ್ಪನ್ ಕೂಡ 2004ರ ಎನ್ ಕೌಂಟರ್ ನಲ್ಲಿ ಹತನಾಗಿದ್ದ.
ಪಾಲಾರ್ ಬಾಂಬ್ ಸ್ಫೋಟ ಪ್ರಕರಣದ ಹಿನ್ನೆಲೆ: ಮಹದೇಶ್ವರ ಬೆಟ್ಟಕ್ಕೆ ಹೊಂದಿಕೊಂಡಿರುವ ಗ್ರಾಮ ಪಾಲಾರ್. ಇದರ ಸುತ್ತಮುತ್ತ ಸುಮಾರು 50 ಕಿ.ಮೀ. ವ್ಯಾಪ್ತಿಯನ್ನು ವೀರಪ್ಪನ್ ಆಕ್ರಮಿಸಿಕೊಂಡಿದ್ದ. 1993ರ ಏ.9ರಂದು ತಮಿಳುನಾಡಿನ ಅಂದಿನ ಎಸ್‌ಟಿಎಫ್ ಮುಖ್ಯಸ್ಥರಾಗಿದ್ದ ಗೋಪಾಲಕೃಷ್ಣ ಮತ್ತು ಅವರ ತಂಡದ ಮೇಲೆ ವೀರಪ್ಪನ್ ಸಹಚರರು ದಾಳಿ ನಡೆಸಲು ಸಂಚು ರೂಪಿಸಿದ್ದರು. ಸಾಕಷ್ಟು ಬಾಂಬ್‌ಗಳನ್ನು ಸಂಗ್ರಹಿಸಿಟ್ಟಿದ್ದ ವೀರಪ್ಪನ್ ಸಹಚರರು ಪಾಲಾರ್ ಸಮೀಪದ ಸೊರೆಕಾಯಿಪಟ್ಟಿ ಬಳಿ ನೆಲಬಾಂಬ್ ಹೂತಿಟ್ಟಿದ್ದರು. ಗೋಪಾಲ್‌ಕೃಷ್ಣ ಅವರನ್ನು ಒಳಗೊಂಡ ವಿಶೇಷ ತಂಡ ಮಾಹಿತಿದಾರರ ಜೊತೆ ತಮಿಳುನಾಡು ಗಡಿ ಭಾಗದಲ್ಲಿರುವ ಪಾಲಾರ್‌ನತ್ತ ಹೊರಟಿತ್ತು. ಸೈಮನ್ ಸಿಡಿಸಿದ ನೆಲಬಾಂಬ್‌ನಿಂದ 22 ಮಂದಿ ಹುತಾತ್ಮರಾಗಿದ್ದರು, ಹಲವರು ಗಾಯಗೊಂಡಿದ್ದರು. ಘಟನೆ ಸಂಬಂಧ ವೀರಪ್ಪನ್ ಸೇರಿ 124 ಮಂದಿ ವಿರುದ್ಧ ಪ್ರಕರಣ ದಾಖಲಾಗಿತ್ತು.
9 ಏಪ್ರಿಲ್ 1993 ರಂದು ಕರ್ನಾಟಕ ಮತ್ತು ತಮಿಳುನಾಡು ಗಡಿಯಲ್ಲಿರುವ ಪಾಲಾರ್‌ನಲ್ಲಿ ನೆಲಬಾಂಬ್ ಸ್ಫೋಟದಲ್ಲಿ 22 ಪೊಲೀಸರನ್ನು ಕೊಂದು ಅನೇಕರನ್ನು ಗಾಯಗೊಳಿಸಿದ್ದಕ್ಕಾಗಿ ಜ್ಞಾನಪ್ರಕಾಶ್ ಮತ್ತು ಸೈಮನ್ ಅಂತೋನಿಯಪ್ಪ, ಮೀಸೆಕರ ಮಾದಯ್ಯ ಮತ್ತು ಬಿಲವೇಂದ್ರನ್ ಅವರನ್ನು ಬಂಧಿಸಲಾಗಿತ್ತು. 1994 ರಲ್ಲಿ ಭಯೋತ್ಪಾದಕ ಮತ್ತು ವಿಚ್ಛಿದ್ರಕಾರಕ ಚಟುವಟಿಕೆಗಳ (ಟಾಡಾ) ತಡೆ ಕಾಯಿದೆಯಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ 124 ವ್ಯಕ್ತಿಗಳಲ್ಲಿ ಈ ನಾಲ್ವರು ಭಾಗಿಯಾಗಿದ್ದರು. ಈ ಪೈಕಿ 117 ಮಂದಿಯನ್ನು ಖುಲಾಸೆಗೊಳಿಸಿದರೆ, ಏಳು ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.
ಮೈಸೂರು ಕೇಂದ್ರ ಕಾರಾಗೃಹದಲ್ಲಿದ್ದ ನಾಲ್ವರನ್ನು 2004ರಲ್ಲಿ ಸುಪ್ರೀಂ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿದ ಬಳಿಕ ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿತ್ತು. ಆದಾಗ್ಯೂ 2014 ರಲ್ಲಿ, ಸುಪ್ರೀಂ ಕೋರ್ಟ್ ಅವರ ಮರಣ ದಂಡನೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿತು.
ಇದನ್ನೂ ಓದಿ: 'ಅಮೆರಿಕಾಸ್ ಗಾಟ್ ಟ್ಯಾಲೆಂಟ್' ಶೋ ಸ್ಪರ್ಧಿ, 7.6 ಅಡಿ ಎತ್ತರದ ಮಾಜಿ ಕಾನ್ಸ್ಟೆಬಲ್ ಅರೆಸ್ಟ್