ಚಾಮರಾಜನಗರ: ಕಬಿನಿ ಜಲಾಶಯದಿಂದ ಹೊರಹರಿವು ಹೆಚ್ಚಾಗುತ್ತಿದ್ದಂತೆ, ಕೊಳ್ಳೇಗಾಲ ತಾಲೂಕಿನ ಭರಚುಕ್ಕಿ ಜಲಪಾತ ಭೋರ್ಗರೆದು ಧುಮ್ಮಿಕ್ಕುತ್ತಿದೆ. ಜಲಪಾತದಲ್ಲಿ ನೀರಿನ ಹರಿವು ಹೆಚ್ಚಾಗಿರುವುದರಿಂದ ನದಿಪಾತ್ರಕ್ಕೆ ಪ್ರವಾಸಿಗರು ಮತ್ತು ಸ್ಥಳೀಯರು ತೆರಳದಂತೆ ಜಿಲ್ಲಾಡಳಿತ ಎಚ್ಚರಿಕೆ ರವಾನಿಸಿದೆ.
ಕಬಿನಿಯಿಂದ 1 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಹೊರಬಿಟ್ಟ ಹಿನ್ನೆಲೆ, ಭರಚುಕ್ಕಿ ಜಲಪಾತ ಮೈದುಂಬಿ ಹರಿಯುತ್ತಿದೆ. ಕಳೆದ ಬಾರಿ ಕಾವೇರಿ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದ್ದ ವೆಸ್ಲಿ ಸೇತುವೆ ಬಳಿ ರಭಸವಾಗಿ ನೀರು ಹರಿಯುತ್ತಿದ್ದು, ನೋಡುಗರ ಮೈಜುಮ್ಮೆನ್ನಿಸುವಂತಿದೆ.
ಇನ್ನು, ಜಲಪಾತದ ತಟಕ್ಕೆ ಮತ್ತು ನದಿಪಾತ್ರದಲ್ಲಿ ಪ್ರವಾಸಿಗರು ಮತ್ತು ಸ್ಥಳೀಯರು ಅತ್ತ ಸುಳಿಯದಂತೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ನೀಡಿದೆ. ಅಲ್ಲದೆ,, 5 ಗಂಟೆಯ ಬಳಿಕ ಜಲಪಾತ ವೀಕ್ಷಣಾ ಗೋಪುರದ ಆವರಣದಲ್ಲಿ ಯಾರೂ ನಿಲ್ಲದಂತೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.