ಚಾಮರಾಜನಗರ: ವೃದ್ಧಾಪ್ಯ ವೇತನ ಹಾಗೂ ಅನ್ನಭಾಗ್ಯದ ಹಣ ಕೈ ಸೇರದ ವೃದ್ಧೆಯೊಬ್ಬರು ಡಿಸಿಗೆ ದೂರು ಕೊಟ್ಟು ತದನಂತರ ತನ್ನ ಹಣ ಪಡೆದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ನಡೆದಿದೆ. ಚಾಮರಾಜನಗರ ತಾಲೂಕಿನ ಕಿಲಗೆರೆ ಗ್ರಾಮದ ಚೆನ್ನಬಸಮ್ಮ ಎಂಬವರು ದೂರು ಕೊಟ್ಟು ಹಣ ಪಡೆದವರು.
ತೆರಕಣಾಂಬಿ ಗ್ರಾಹಕ ಸೇವಾಕೇಂದ್ರದಲ್ಲಿ ತನಗರಿವಿಲ್ಲದೇ ವೃದ್ಧಾಪ್ಯ ವೇತನ ₹1200 ಹಾಗೂ ಅನ್ನಭಾಗ್ಯದ ನಗದು ₹340 ಡ್ರಾ ಆಗಿದೆ. ಆದರೆ ಅದನ್ನು ತಾನು ಪಡೆದಿಲ್ಲ, ತನಗೆ ನ್ಯಾಯ ದೊರಕಿಸಿಕೊಡಿ ಎಂದು ಡಿಸಿ ಶಿಲ್ಪಾನಾಗ್ ಅವರಿಗೆ ಕಳೆದ 21ರಂದು ದೂರು ಕೊಟ್ಟಿದ್ದರು. ಡಿಸಿ ಚಾಮರಾಜನಗರ ತಹಶಿಲ್ದಾರ್ ಬಸವರಾಜು ಅವರಿಗೆ ವಿಚಾರಣೆ ನಡೆಸುವಂತೆ ಸೂಚಿಸಿದ್ದರು. ತಹಶಿಲ್ದಾರ್ ಗ್ರಾಹಕ ಸೇವಾ ಕೇಂದ್ರದ ಪ್ರತಿನಿಧಿ, ಫಲಾನುಭವಿ ಚೆನ್ನಬಸಮ್ಮ ಇಬ್ಬರನ್ನೂ ವಿಚಾರಣೆ ನಡೆಸಿ ಡ್ರಾ ಆದ ಹಣ ವೃದ್ಧೆ ಕೈ ಸೇರದಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದರಿಂದ ಗ್ರಾಹಕ ಸೇವಾ ಕೇಂದ್ರದ ಪ್ರತಿನಿಧಿಯಿಂದ ₹1,540 ಅನ್ನು ವೃದ್ಧೆಗೆ ಕೊಡಿಸಿದ್ದಾರೆ. ತನ್ನ ಹಣಕ್ಕಾಗಿ ದೂರು ಕೊಟ್ಟಿದ್ದಷ್ಟೇ ಅಲ್ಲದೇ ಹಣ ಪಡೆದು ಅಜ್ಜಿ ನಗು ಬೀರಿದ್ದಾರೆ.
ವಿಜಯಪುರದಲ್ಲೂ ಇಂಥದ್ದೇ ಘಟನೆ: ವೃದ್ಧಾಪ್ಯ ವೇತನ ಮಂಜೂರು ಮಾಡುವಂತೆ ಕೋರಿ ಜಿಲ್ಲಾಧಿಕಾರಿ ಮುಂದೆ ಅಳಲು ತೋಡಿಕೊಂಡಿದ್ದ ಬಡ ವೃದ್ಧ ದಂಪತಿಗೆ ಒಂದೇ ಗಂಟೆಯೊಳಗೆ ವೃದ್ಧಾಪ್ಯ ವೇತನ ಮಂಜೂರು ಮಾಡುವ ಮೂಲಕ ಡಿಸಿ ಮಾನವೀಯತೆ ಮೆರೆದಿದ್ದರು. ವಿಜಯಪುರದ ಗ್ಯಾಂಗಬಾವಡಿಯ ನಿವಾಸಿಗಳಾದ ಸೂರ್ಯಕಾಂತ ಹಾಗೂ ಅವರ ಪತ್ನಿ ಸುರೇಖಾ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ, ತಮ್ಮ ಜೀವನೋಪಾಯಕ್ಕಾಗಿ ವೃದ್ಧಾಪ್ಯ ವೇತನ ಮಂಜೂರು ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಆಗ ಜಿಲ್ಲಾಧಿಕಾರಿಗಳು ದೂರು ಆಲಿಸಿ ಬಡ ವೃದ್ಧ ದಂಪತಿಗೆ ಒಂದು ಗಂಟೆಯೊಳಗೆ ಪಿಂಚಣಿ ಮಂಜೂರು ಮಾಡಿಸಿಕೊಟ್ಟಿದ್ದರು.
ಮತ್ತೊಂದೆಡೆ, ಪಿಂಚಣಿ ಪಡೆಯಲು ವೃದ್ಧೆ ಪತ್ನಿಯನ್ನು ಆಕೆಯ ಪತಿ ಹಾಗೂ ಮಗ ಕವಡಿಯಲ್ಲಿ ಕೂರಿಸಿಕೊಂಡು ಕಚೇರಿಗೆ ಕೆರೆ ತಂದಿದ್ದ ಘಟನೆ ಜಾರ್ಖಂಡ್ನ ಲತೇಹಾರ್ನಲ್ಲಿ ನಡೆದಿತ್ತು. ಬುಡಕಟ್ಟು ಕುಟುಂಬದ ವೃದ್ಧೆಯ ಪಿಂಚಣಿ ಪಡೆಯಲು ಆಕೆಯ ಪತಿ ಹಾಗೂ ಮಗ ಅವರನ್ನು ಕವಡಿಯಲ್ಲಿ ಕುರಿಸಿಕೊಂಡು ಮಹುವದಂಡ್ ಬ್ಲಾಕ್ ಕೇಂದ್ರಕ್ಕೆ ಕರೆತಂದಿದ್ದರು. ಗ್ರಾಮದಲ್ಲಿ ರಸ್ತೆ ನಿರ್ಮಾಣವಾಗದೇ ಇರುವುದೇ ಈ ಘಟನೆಗೆ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದರು.
ಇದನ್ನೂ ಓದಿ: ಕಾಸು ಕೊಟ್ಟರೆ ಯುವಕರಿಗೂ ವೃದ್ಧಾಪ್ಯ ವೇತನ ಮಂಜೂರು ಮಾಡಿಸುತ್ತಿದ್ದವನ ಬಂಧನ