ಕೊಳ್ಳೇಗಾಲ : ಪ್ರಜಾಪ್ರಭುತ್ವದಲ್ಲಿನ ಯಾವುದೇ ಚುನಾಯಿತ ಪ್ರತಿನಿಧಿಯೂ ಪ್ರಶ್ನಾತೀತನಲ್ಲ. ಎಲ್ಲರನ್ನೂ ಟೀಕಿಸುವ, ಪ್ರಶ್ನಿಸುವ, ವಿಮರ್ಶಿಸುವ ಹಕ್ಕಿದೆ. ಆದರೆ, ಇವೆಲ್ಲವೂ ಆರೋಗ್ಯಕರವಾಗಿರಬೇಕು ಎಂದು ಶಾಸಕ ಎನ್ ಮಹೇಶ್ ತಿಳಿಸಿದ್ದಾರೆ.
ಬಿಎಸ್ಪಿಯಿಂದ ಉಚ್ಛಾಟನೆಗೊಂಡ ಬಳಿಕ ಎನ್.ಮಹೇಶ್ ವಿರುದ್ಧ ಫೇಸ್ಬುಕ್ ಮತ್ತು ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಕೀಳು ಶಬ್ಧಗಳಿಂದ ಟೀಕಿಸುತ್ತಿರುವುದರ ಹಿನ್ನೆಲೆ ಅಭಿಮಾನಿ ಸಿದ್ದರಾಜು ಪೊಲೀಸರಿಗೆ ದೂರು ನೀಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಸ್ವತಃ ಶಾಸಕರೇ ಮಾಧ್ಯಮದೊಂದಿಗೆ ಮಾತನಾಡಿದರು.
ಯಾರಿಗೂ ಕೂಡ ನನ್ನ ಚಾರಿತ್ರ್ಯ ವಧೆ ಮಾಡುವ ಹಕ್ಕಿಲ್ಲ. ಶಾಸಕ ಎನ್ ಮಹೇಶ್ ಮಾರಾಟವಾಗಿದ್ದಾರೆ ಎಂದು ಬೈಯುವುದಕ್ಕೆ ಏನು ಹಕ್ಕಿದೆ. ಇದು ಇಷ್ಟಕ್ಕೆ ನಿಲ್ಲಬೇಕು. ನನಗೆ ಗೊತ್ತಿದೆ ಬಿಎಸ್ಪಿಯಿಂದ ಉಚ್ಛಾಟನೆಯಾದ ಬಳಿಕ ಈ ರೀತಿ ಸಾಮಾಜಿಕ ಜಾಲ ತಾಣಗಳಲ್ಲಿ ನಿಂದಿಸುವ ಪ್ರವೃತ್ತಿ ಬೆಳೆಯುತ್ತಿದೆ. ಸಂಸ್ಕೃತಿ ಅಲ್ಲದ, ಅಸಂವಿಧಾನಿಕ ಮಾತುಗಳನ್ನು ನಾನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ನಂತರ ಮಾತನಾಡಿದ ಅವರು, ನನ್ನ ಜೊತೆ ಇದ್ದವರೇ ಇದೀಗ ನನ್ನ ವಿರುದ್ಧ ಈ ಕೃತ್ಯ ಮಾಡುತ್ತಿದ್ದಾರೆ. ನನಗೆ ಗೊತ್ತಿದೆ ಯಾರು ಯಾರು ಇದಕ್ಕೆ ಪಂಪ್ ಮಾಡುತ್ತಿದ್ದಾರೆ ಎಂದು. ಅವರು ನನ್ನ ಕೆಲ ಅಭಿಮಾನಿಗಳ ಮೇಲೆ ದೂರು ನೀಡಿದ್ದಾರೆ. ಅಲ್ಲದೇ, ನನ್ನ ಮೇಲೆ ಇಲ್ಲಸಲ್ಲದ ಆರೋಪ ಹಾಗೂ ತೇಜೋವಧೆಗೆ ಪ್ರಯತ್ನ ಮಾಡಿರುವ ಬಗ್ಗೆ ನ್ಯಾಯಾಲಯದ ಮುಂದೆ ಉತ್ತರ ನೀಡಲಿ ಎಂದಿದ್ದಾರೆ.