ಚಾಮರಾಜನಗರ: ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಜಿಲ್ಲೆಯಿಂದ ಭಾಗವಹಿಸಿದ್ದು 12 ಮಂದಿಯಲ್ಲ, ಇಬ್ಬರು ಮಾತ್ರ ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೊದಲಿಗೆ 12 ಮಂದಿ ಎಂದು ಸರ್ಕಾರದ ಪಟ್ಟಿ ಬಂದಿತ್ತು. ಆದರೆ, ಅವರ ಪ್ರವಾಸ ಕುರಿತು ತನಿಖೆಗೆ ಒಳಪಡಿಸಿದಾಗ ಇಬ್ಬರು ಮಾತ್ರ ಧಾರ್ಮಿಕ ಸಭೆಗೆ ಹೋದವರಾಗಿದ್ದು, ಉಳಿದವರು ಗೋದ್ರಾ ತೆರಳಿದ್ದರು ಎಂದು ಮಾಹಿತಿ ನೀಡಿದರು. ದೆಹಲಿಯ ಧಾರ್ಮಿಕ ಸಭೆಗೆ ತೆರಳಿದ್ದವರಲ್ಲಿ ಒಬ್ಬರು ಮಾತ್ರ ಜಿಲ್ಲೆಗೆ ಬಂದಿದ್ದು, ಅವರನ್ನು ಕ್ವಾರಂಟೈನ್ಲ್ಲಿಡಲಾಗಿದೆ. ಇನ್ನೊಬ್ಬರು ಬೆಂಗಳೂರಿನಲ್ಲಿದ್ದು, ಅವರ ಮೇಲೂ ನಿಗಾ ವಹಿಸಲಾಗಿದೆ ಎಂದು ಹೇಳಿದರು.
ಜುಬಿಲಿಯೆಂಟ್ ಸೋಂಕಿತ ನೌಕರನನ್ನ ಭೇಟಿ ಮಾಡಿದ್ದೆ ಎಂದು ನೌಕರರೊಬ್ಬರ ಸಂಬಂಧಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದರಿಂದ ಅವರ ಗಂಟಲು ದ್ರವ, ರಕ್ತದ ಮಾದರಿಯನ್ನು ಪರೀಕ್ಷೆಗೊಳಪಡಿಸಲಾಗಿದೆ. ಸರ್ಕಾರವು ಕಟ್ಟಡ ಕಾರ್ಮಿಕರು, ಸ್ಲಂ ನಿವಾಸಿಗಳು, ವಲಸಿಗ ಕಾರ್ಮಿಕರಿಗೆ ಉಚಿತ ಹಾಲು ವಿತರಿಸಬೇಕೆಂದು ಸೂಚಿಸಿದಂತೆ ಚಾಮುಲ್ನಿಂದ 9300 ಮಂದಿಗೆ ಒಟ್ಟು 10 ಸಾವಿರದ ಲೀಟರ್ ಹಾಲನ್ನು ವಿತರಿಸಲಾಗುವುದು ಎಂದರು.