ಚಾಮರಾಜನಗರ: ಶ್ರೀಗಂಧದ ಮರ ಕದಿಯುವಾಗ ವೃದ್ಧನನ್ನು ಕೊಂದಿದ್ದ ಪ್ರಕರಣವನ್ನು ಚಾಮರಾಜನಗರ ಪೂರ್ವ ಠಾಣೆ ಪೊಲೀಸರು ಭೇದಿಸಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಚಾಮರಾಜನಗರ ತಾಲೂಕಿನ ಬೂದಿಪಡಗದ ಕಳ್ಳ ಮಹಾದೇವ, ಕಾಳಿಕಾಂಬಾ ಕಾಲೋನಿಯ ಮುನಿಯ, ಚಂದಕವಾಡಿಯ ಇರ್ಫಾನ್ ಬಂಧಿತ ಆರೋಪಿಗಳು. ಕಳ್ಳ ಮಹಾದೇವನ ಇಬ್ಬರು ಮಕ್ಕಳು, ಬೇಡಗುಳಿಯ ಮಹೇಶ್ ಎಂಬ ಇನ್ನೂ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಂದಕವಾಡಿಯ ಇರ್ಫಾನ್ ಎಂಬಾತ ಶ್ರೀಗಂಧದ ಮರವನ್ನು ಖರೀದಿಗೆ ಕೇಳಿದ ವೇಳೆ ಮಾಲೀಕ ಶಿವಬಸಪ್ಪ ಒಪ್ಪಿರಲಿಲ್ಲ. ಇದರಿಂದಾಗಿ ಮರ ಕದಿಯಲು ಮುಂದಾದ ಆರೋಪಿಗಳು ಕಳೆದ ಅ. 5ರ ರಾತ್ರಿ ಮನೆ ಮುಂದಿನ ಮರ ಕಡಿಯುತ್ತಿದ್ದಾಗ ಅಡ್ಡ ಬಂದಿದ್ದ ಮಾಲೀಕ ಶಿವಬಸಪ್ಪ(75) ಅವರನ್ನು ಕೈ-ಕಾಲು ಕಟ್ಟಿ, ಪಂಚೆಯಿಂದ ಉಸಿರುಗಟ್ಟಿಸಿ ಕೊಂದು ಮಾಳವೊಂದರಲ್ಲಿ ಬಿಸಾಡಿ ಬಂದಿದ್ದರು.
ಶ್ವಾನ ದಳದ ಸಹಾಯದಿಂದ ಮೃತದೇಹವನ್ನು ಪತ್ತೆ ಹಚ್ಚಲಾಗಿತ್ತು. ಈಗ ಮೂವರು ಆರೋಪಿಗಳು ಜೈಲುಪಾಲಾಗಿದ್ದು, ಉಳಿದ ಮೂವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಪ್ರಕರಣ ಸಂಬಂಧ ರೈತ ಸಂಘದವರು ಶ್ರೀಗಂಧದ ಮರ ಕಳ್ಳರನ್ನು ಕೂಡಲೇ ಪತ್ತೆ ಹಚ್ಚಬೇಕೆಂದು ಕಳೆದ 3ರಂದು ಎಸ್ಪಿ ಅನಿತಾ ಹದ್ದಣ್ಣನವರ್ಗೆ ಮನವಿ ಕೂಡ ಸಲ್ಲಿಸಿದ್ದರು.