ಚಾಮರಾಜನಗರ: ನೆರೆ ಪರಿಹಾರ ವಿಚಾರದಲ್ಲಿ ಆಗುತ್ತಿರುವ ವಿಳಂಬದ ವಿರುದ್ಧ ಬಿಜೆಪಿ ಸಂಸದ ವಿ ಶ್ರೀನಿವಾಸ್ ಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನ ಕಣ್ಣು ಮುಚ್ಚಿ ಕುಳಿತಿಲ್ಲ. ನಿಮ್ಮೆಲ್ಲಾ ಆಟ-ಪಾಠ ನೋಡುತ್ತಿದ್ದಾರೆ. ಜನರ ತಾಳ್ಮೆಯನ್ನು ಪರೀಕ್ಷಿಸಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಗರಂ ಆದರು.
ರಾಜ್ಯದಿಂದ ಆಯ್ಕೆಯಾಗಿರುವ 25 ಸಂಸದರು ಏನು ಮಾಡಬೇಕು. ಒಮ್ಮೆಯೂ ವಿಶ್ವಾಸಕ್ಕೆ ತೆಗೆದುಕೊಂಡು ಸಭೆ ನಡೆಸಿಲ್ಲ. ನೆರೆ ಪರಿಹಾರ ಕೊಡಿಸುವಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅಸಹಾಯಕರಾಗಿದ್ದಾರೆ ಎಂದು ವಾಕ್ಪ್ರಹಾರ ನಡೆಸಿದರು.
ಈಗಾಗಲೇ ಸರ್ವಪಕ್ಷ ನಿಯೋಗವನ್ನು ಕೇಂದ್ರಕ್ಕೆ ಕರೆದೊಯ್ಯಬೇಕಿತ್ತು. ಆದರೆ, ಕೇಂದ್ರ ಸಚಿವರು ಹಾರಿಕೆ ಉತ್ತರ ನೀಡುತ್ತಾ ಸಬೂಬು ಹೇಳುತ್ತಿದ್ದಾರೆ. ನಮಗೂ ಒಂದು ಮಿತಿಯಿದೆ. ಮಾತನಾಡಲೇ ಬೇಕಿದೆ ಎಂದು ತಿಳಿಸಿದರು.