ಕೊಳ್ಳೇಗಾಲ (ಚಾಮರಾಜನಗರ): ಕೊಳ್ಳೇಗಾಲ ಟಿಎಪಿಸಿಎಂಎಸ್‌ನಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಕಳೆದ 2 ವರ್ಷಗಳ ಹಿಂದೆಯೇ ತನಿಖೆ ಆರಂಭಿಸಲಾಗಿದ್ದು, ಅಕ್ರಮದಲ್ಲಿ ಭಾಗಿಯಾಗಿರುವವರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಂಡು ಹಣವನ್ನು ವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಹನೂರು ಶಾಸಕ ಆರ್. ನರೇಂದ್ರ ತಿಳಿಸಿದರು.
ಹನೂರು ಪಟ್ಟಣದ ಲೋಕೋಪಯೋಗಿ ಇಲಾಖೆಯ ವಸತಿ ಗೃಹದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಗರಣದ ಬಗ್ಗೆ ಕೊಳ್ಳೇಗಾಲ ಶಾಸಕ ಎನ್. ಮಹೇಶ್ ಅವರಿಗೆ ಮಾಹಿತಿ ಕೊರತೆಯಿದೆ. ಅದರಿಂದ ಕೆಲ ತಪ್ಪು ಮಾಹಿತಿಗಳನ್ನು ಅವರು ನೀಡಿದ್ದಾರೆ ಎಂದರು. ಈ ಬಗ್ಗೆ ಮಾಹಿತಿ ಅಗತ್ಯವಿದ್ದಲ್ಲಿ ಕಾನೂನು ರೀತಿ ಪಡೆದುಕೊಂಡು ಪರಿಶೀಲನೆ ನಡೆಸಲಿ ಎಂದು ಹೇಳಿದರು.
ಟಿಎಪಿಸಿಎಂಎಸ್‌ನಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಕಳೆದ 2 ವರ್ಷಗಳ ಹಿಂದೆಯೇ ಅಂದಿನ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ತನಿಖೆ ಕೈಗೊಳ್ಳಲು ಉಪ ವಿಭಾಗಾಧಿಕಾರಿಗಳ ನೇತೃತ್ವದಲ್ಲಿ ತಂಡ ರಚಿಸಿದ್ದು, ತನಿಖೆಯೂ ನಡೆಯುತ್ತಿದೆ. ಅಲ್ಲದೆ ಈ ಅಕ್ರಮದಲ್ಲಿ ಭಾಗಿಯಾಗಿದ್ದ ಎನ್ನಲಾದ ನೌಕರ ಸಿದ್ಧರಾಜು ವಿರುದ್ಧ ಈಗಾಗಲೇ ಪ್ರಕರಣವನ್ನೂ ದಾಖಲಿಸಲಾಗಿದ್ದು, ಆತ ಜಾಮೀನು ಪಡೆದು ಹೊರ ಬಂದಿದ್ದಾನೆ.
ಹನೂರು ಪಟ್ಟಣದ ಪೆಟ್ರೋಲ್ ಬಂಕ್‌ನಲ್ಲಿ 79 ಲಕ್ಷಗಳ ಅಕ್ರಮ ನಡೆದಿರುವ ಬಗ್ಗೆ ಈಗಾಗಲೇ ಕ್ರಮ ಕೈಗೊಂಡಿದ್ದು, ಪೊಲೀಸ್ ಠಾಣೆಯಲ್ಲಿ ದೂರನ್ನು ಸಹ ನೀಡಿದ್ದು ಆರೋಪಿಗಳನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ ಎಂದರು.
ನಾನೂ ಕೂಡ ಓರ್ವ ಸಹಕಾರಿಯೇ : ಚಾಮರಾಜನಗರ ಜಿಲ್ಲೆಯಲ್ಲಿ ನಾನೂ ಕೂಡ ಓರ್ವ ಸಹಕಾರಿಯಾಗಿದ್ದು, ಕೊಳ್ಳೇಗಾಲ ಟಿಎಪಿಸಿಎಂಎಸ್ ಅನ್ನು ನಮ್ಮ ದೊಡ್ಡಪ್ಪನವರಾದ ವೆಂಕಟೇಗೌಡರು ಪ್ರಾರಂಭಿಸಿ ಬಳಿಕ ಮಾಜಿ ಸಚಿವದ್ವಯರಾದ ದಿ. ರಾಜೂ ಗೌಡ ಮತ್ತು ದಿ. ನಾಗಪ್ಪನವರು ಅಭಿವೃದ್ಧಿಯ ದಿಸೆಯಲ್ಲಿ ಕೊಂಡೊಯ್ದಿದ್ದಾರೆ. ಇಂತಹ ಸಂಸ್ಥೆಯ ಗೌರವ ಕಾಪಾಡಬೇಕಿರುವುದು ನನ್ನ ಮೇಲಿನ ಜವಾಬ್ದಾರಿಯೂ ಆಗಿದೆ ಎಂದರು.
ನಾನು ಎಂಡಿಸಿಸಿ ಬ್ಯಾಂಕಿನ ಅಧ್ಯಕ್ಷನಾದ ಮೇಲೆ ಮತ್ತು ಅಪೆಕ್ಸ್ ಬ್ಯಾಂಕಿನ ನಿರ್ದೇಶಕನಾದ ಬಳಿಕ ಕೆಲಸದ ಒತ್ತಡದಿಂದಾಗಿ ಕಳೆದ ಎರಡೂವರೆ ವರ್ಷಗಳಿಂದ ಟಿಎಪಿಸಿಎಂಎಸ್‌ನ ಯಾವುದೇ ಸಭೆಗಳಲ್ಲಿ ಭಾಗವಹಿಸಿಲ್ಲ. ಈ ಬಗ್ಗೆ ಯಾರಿಗಾದರೂ ಅನುಮಾನಗಳಿದ್ದಲ್ಲಿ ಹಾಜರಾತಿ ಸಹಿ ಪರಿಶೀಲನೆ ನಡೆಸಲಿ. ಈ ಅಕ್ರಮದಲ್ಲಿ ಭಾಗಿಯಾಗುವವರನ್ನು ಯಾವುದೇ ಕಾರಣಕ್ಕೂ ರಕ್ಷಿಸುವಂತಿಲ್ಲ ಎಂದರು.
ಒಂದೊಮ್ಮೆ ಈ ಬಗ್ಗೆ ಯಾವುದಾದರೂ ಅಧಿಕಾರಿಯ ಜೊತೆ ಮಾತನಾಡಿರುವ ಬಗ್ಗೆಯಾಗಲಿ ಅಥವಾ ಯಾರಾದರೂ ಅಧಿಕಾರಿಗೆ ನೇರವಾಗಿ ಅಥವಾ ದೂರವಾಣಿ ಮೂಲಕ ಸೂಚನೆ ನೀಡಿರುವುದೇ ಆಗಲಿ ಯಾವುದಾದರೂ ಸಾಕ್ಷ್ಯಾಧಾರಗಳಿದ್ದಲ್ಲಿ ಸಾಬೀತುಪಡಿಸಲಿ ಎಂದು ನೇರವಾಗಿ ಸವಾಲು ಎಸೆದರು.