ಕೊಳ್ಳೇಗಾಲ(ಚಾಮರಾಜನಗರ): ಪಿಜಿ ಪಾಳ್ಯ ಬಳಿ ನಡೆದಿದ್ದ ಕೆಎಸ್ಆರ್ಟಿಸಿಬಸ್ ದುರಂತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದವರನ್ನು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಇಂದು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಮಾ.14 ರಂದು ಪಿಜಿ ಪಾಳ್ಯದ ಬಳಿ ಕೆಎಸ್ಆರ್ಟಿಸಿ ಬಸ್ ಹಳ್ಳಕ್ಕೆ ಉರುಳಿದ ಘಟನೆ ನಡೆದಿತ್ತು. ಬಸ್ನಲ್ಲಿದ್ದ 80ಕ್ಕೂ ಹೆಚ್ಚು ಮಂದಿಗಳ ಪೈಕಿ ಮೂವರು ಮೃತ ಪಟ್ಟಿದ್ದರು. ಕೊಳ್ಳೇಗಾಲ ಆಸ್ಪತ್ರೆಗೆ 30ಕ್ಕೂ ಹೆಚ್ಚು ಜನರು ಗಾಯಗೊಂಡು ಚಿಕಿತ್ಸೆಗೆ ದಾಖಲಾಗಿದ್ದರು. ಇನ್ನು ತೀವ್ರ ಗಾಯಗೊಂಡು 7 ಮಂದಿಯನ್ನು ಮೈಸೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈ ಹಿನ್ನೆಲೆ ಇಂದು ಸಚಿವರು ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿ, ಧೈರ್ಯ ತುಂಬಿದ್ದಾರೆ.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಬಸ್ ದುರಂತ ಆಗಬಾರದಿತ್ತು. ನಡೆದು ಹೋಗಿದೆ. ಬಸ್ನಲ್ಲಿ 80ಕ್ಕೂ ಅಧಿಕ ಮಂದಿ ಪ್ರಯಾಣಿಸುತ್ತಿದ್ದರು ಎಂಬುದು ತಿಳಿದು ಬಂದಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿದೆ ಎಂದರು.
ಇದನ್ನೂ ಓದಿ: ಹನೂರಲ್ಲಿ ಹಳ್ಳಕ್ಕೆ ಬಿದ್ದ ಕೆಎಸ್ಆರ್ಟಿಸಿ ಬಸ್ : ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ, ಕೆಲವರ ಸ್ಥಿತಿ ಗಂಭೀರ