ಚಾಮರಾಜನಗರ : ಸಚಿವ ವಿ.ಸೋಮಣ್ಣ ಅವರಿಂದು ವರುಣ ಬಳಿಕ ಚಾಮರಾಜನಗರದಲ್ಲಿ ಉಮೇದುವಾರಿಕೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅವರು ಆಸ್ತಿ ವಿವರಗಳನ್ನು ಘೋಷಣೆ ಮಾಡಿದ್ದಾರೆ. ಸೋಮಣ್ಣಗಿಂತ ಪತ್ನಿ ಶೈಲಜಾ ಶ್ರೀಮಂತೆಯಾಗಿದ್ದಾರೆ. ಸೋಮಣ್ಣ ಬಳಿ 3.61 ಕೋಟಿ ರೂ ಮೌಲ್ಯದ ಚರಾಸ್ಥಿ ಇದ್ದರೆ, ಪತ್ನಿ 13.01 ಕೋಟಿ ಮೌಲ್ಯದ ಚರಾಸ್ಥಿ ಹೊಂದಿದ್ದಾರೆ. ಶೈಲಜಾ ಯಾವುದೇ ವಾಹನ ಹೊಂದಿಲ್ಲ. ಸೋಮಣ್ಣ 3 ಕಾರುಗಳನ್ನು ಹೊಂದಿದ್ದಾರೆ.
ಸೋಮಣ್ಣ ಕೈಯಲ್ಲಿ 4.1 ಲಕ್ಷ ನಗದು, ಪತ್ನಿ ಬಳಿ 9.99 ಲಕ್ಷ ಹಣ ನಗದು ಇದೆ. ಪತಿ- ಪತ್ನಿ ಇಬ್ಬರೂ ಸಾಲ ಹೊಂದಿದ್ದು ಸೋಮಣ್ಣ 2.9 ಕೋಟಿ ಸಾಲ ಹೊಂದಿದ್ದರೆ, ಶೈಲಜಾ ಅವರಿಗೆ 4.5 ಕೋಟಿ ರೂ ಸಾಲವಿದೆ. ಶೈಲಜಾ ಅವರಿಂದಲೇ ಸೋಮಣ್ಣ 20 ಲಕ್ಷ ರೂ. ಸಾಲ ಪಡೆದಿದ್ದಾರೆ. ಸೋಮಣ್ಣ ಸುಮಾರು 10 ಕೋಟಿ ರೂ ಮೌಲ್ಯದ ಸ್ಥಿರಾಸ್ಥಿ ಹೊಂದಿದ್ದು, ಪತ್ನಿ 21 ಕೋಟಿ ಮೌಲ್ಯದ ಸ್ಥಿರಾಸ್ಥಿ ಹೊಂದಿದ್ದಾರೆ. ಇಬ್ಬರದ್ದೂ ಸ್ವಯಾರ್ಜಿತ ಆಸ್ತಿಯಾಗಿದ್ದು ಪಿತ್ರಾರ್ಜಿತವಾಗಿ ಯಾವುದೂ ಇಲ್ಲ ಎಂದು ವಿವರ ನೀಡಿದ್ದಾರೆ.
ಬೃಹತ್ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಕೆ: ಸಚಿವ ಸೋಮಣ್ಣ ಡಾ.ಬಿ.ಆರ್.ಅಂಬೇಡ್ಕರ್ ಭವನದಿಂದ ತಾಲೂಕು ಕಚೇರಿವರೆಗೆ ಬೃಹತ್ ಮೆರವಣಿಗೆ ನಡೆಸಿ ನಾಮಪತ್ರ ಸಲ್ಲಿಕೆ ಮಾಡಿದರು. ಸಂಸದ ಪ್ರತಾಪ್ ಸಿಂಹ, ಎಂಎಲ್‌ಸಿ ನಾರಾಯಣಸ್ವಾಮಿ ಸಾಥ್ ನೀಡಿದರು.
ವಾಟಾಳ್ ನಾಗರಾಜ್ ಕೂಡಾ ಕೋಟ್ಯಧೀಶ : ನಿನ್ನೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಉಮೇದುವಾರಿಕೆ ಸಲ್ಲಿಕೆ ಮಾಡಿದ್ದು, 5.3 ಕೋಟಿ ರೂ ಮೌಲ್ಯದ ಆಸ್ತಿ ಘೋಷಣೆ ಮಾಡಿದ್ದಾರೆ. ಚಿನ್ನಾಭರಣ ಹಾಗೂ ಸಾಲ ತಮಗಿಲ್ಲ ಎಂದು ವಾಟಾಳ್ ತಿಳಿಸಿದ್ದು, ಕೈಯಲ್ಲಿ 50 ಸಾವಿರ ನಗದು ಹೊಂದಿರುವುದಾಗಿ ತಿಳಿಸಿದ್ದಾರೆ. ಬಹುತೇಕ ಆಸ್ತಿ ಪತ್ನಿ ಅವರಿಂದ ಬಂದಿರುವುದಾಗಿ ತಿಳಿಸಿದ್ದಾರೆ.
ಶಾಸಕ ಮಹೇಶ್ ಬಳಿ ಸ್ಥಿರಾಸ್ಥಿಯೇ ಇಲ್ಲ: ಶಾಸಕ ಮಹೇಶ್ ಅವರು ಇಂದು ಕೊಳ್ಳೇಗಾಲದಲ್ಲಿ ನಾಮಪತ್ರ ಸಲ್ಲಿಸಿದರು. ಇದೇ ವೇಳೆ ಆಸ್ತಿ ವಿವರ ಘೋಷಣೆ ಮಾಡಿಕೊಂಡಿದ್ದಾರೆ. ತಮ್ಮ ಹೆಸರಲ್ಲಿ ಯಾವುದೇ ಸ್ಥಿರಾಸ್ತಿಗಳಿಲ್ಲ ಎಂದು ಮಾಹಿತಿ ನೀಡಿದ್ದಾರೆ. 1.83 ಕೋಟಿ ರೂ ಮೌಲ್ಯದ ಚರಾಸ್ಥಿ ಹೊಂದಿರುವುದಾಗಿ ತಿಳಿಸಿದ್ದಾರೆ. ಇದರಲ್ಲಿ 1 ಕಾರು, 150 ಗ್ರಾಂ ಚಿನ್ನ ಮತ್ತು 50 ಲಕ್ಷ ರೂ ಸಾಲ ಕೊಟ್ಟಿರುವುದಾಗಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಅಪ್ಪನ ಬಳಿ 400 ಕೋಟಿ ಆಸ್ತಿ.. ಮಗ 1000 ಕೋಟಿ ಸಂಪತ್ತಿನ ಒಡೆಯ!