ಚಾಮರಾಜನಗರ: ನಾಯಕತ್ವ ಬದಲಾವಣೆ ಕೂಗಿನ ಬಗ್ಗೆ ಎರಡು ಬಾರಿ ಪ್ರಶ್ನೆ ಕೇಳಿದರೂ, ಕೋವಿಡ್ ನಿರ್ವಹಣೆಯೊಂದೇ ನಮಗಿರುವ ಗುರಿ. ಅದೇ ಒನ್ ಪಾಯಿಂಟ್ ಪ್ರೋಗ್ರಾಂ ಎಂದು ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.
ಚಾಮರಾಜನಗರ ಜಿಲ್ಲಾಡಳಿತ ಭವನದಲ್ಲಿ ಆಕ್ಸಿಜನ್ ಸೌಲಭ್ಯಯುಕ್ತ ಉಚಿತ ಬಸ್ ಸೇವೆಗೆ ಚಾಲನೆ ನೀಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ನಾಯಕತ್ವ ಬದಲಾವಣೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಕೋವಿಡ್ ನಿರ್ವಹಣೆ ಬಗೆಗಷ್ಟೇ ನಾವೀಗ ಯೋಚಿಸಬೇಕು. ಬೇರೆ ಯಾವ ವಿಚಾರದ ಬಗ್ಗೆ ಯಾರೂ ಕೂಡ ಮಾತನಾಡಬಾರದು. ಕೋವಿಡ್ ತಡೆಗಟ್ಟುವುದೇ ನಮ್ಮ ಮುಂದಿರುವ ಒಂದಂಶದ ಕಾರ್ಯಕ್ರಮ ಎಂದರು.
ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಹೆಸರು ಪರಿಹಾರ ಪಟ್ಟಿಯಲ್ಲಿ ನಾಪತ್ತೆಯಾಗಿರುವ ಕುರಿತು ಪ್ರತಿಕ್ರಿಯಿಸುತ್ತಾ, ಸಂತ್ರಸ್ತ ಕುಟುಂಬದವರು ಅರ್ಜಿ ಸಲ್ಲಿಸಿದ್ದಾರೆ. ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಪಿಯುಸಿ ವಿದ್ಯಾರ್ಥಿಗಳಿಗೆ ವ್ಯಾಕ್ಸಿನ್ ಕೊಡುವ ಸಂಬಂಧ ಕೇಂದ್ರ ಸರ್ಕಾರದ ಜೊತೆ ಮಾತನಾಡುತ್ತಿದ್ದೇವೆ ಎಂದು ಇದೇ ವೇಳೆ ತಿಳಿಸಿದರು.
ಇಂದು ಚಾಲನೆ ನೀಡಲಾಗಿರುವ ಆಕ್ಸಿಜನ್ ಕಾನ್ಸಂಟ್ರೇಟ್ ಇರುವ ಬಸ್ ಅನ್ನು ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಇರಿಸಲಾಗುವುದು. 8 ಕಾನ್ಸಂಟ್ರೇಟ್ಗಳಿದ್ದು, ಉಸಿರಾಟ ಸಮಸ್ಯೆ ಇರುವವರು ಆಸ್ಪತ್ರೆಗೆ ದಾಖಲಾಗುವ ಮುನ್ನ ಅವರನ್ನು ಸುಧಾರಿಸಲು ಈ ಆಕ್ಸಿಜನ್ ಬಸ್ ಸಹಾಯಕವಾಗಿದೆ ಎಂದು ಸಚಿವರು ತಿಳಿಸಿದರು.
ಈ ಸುದ್ದಿಯನ್ನೂ ಓದಿ: ಗ್ಯಾಂಗ್ ರೇಪ್ ಅಮಾನುಷ ಕೃತ್ಯ, ಸೂಕ್ತ ಕ್ರಮಕ್ಕೆ ಸೂಚಿಸುತ್ತೇನೆ: ಸಿಎಂ ಬಿಎಸ್ವೈ