ಚಾಮರಾಜನಗರ: ಮಾಜಿ ಸಚಿವ, ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ, ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಹಾಗೂ ಜಿಲ್ಲಾಧಿಕಾರಿ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಅಧಿಕಾರಿಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಇಂದು ನಗರ ಪ್ರದಕ್ಷಿಣೆಗೆ ಸ್ಥಳೀಯ ಶಾಸಕರಿಗೆ ಮಾಹಿತಿ ನೀಡದಿದ್ದರಿಂದ ಗರಂ ಆಗಿ ಅವರಿಗೆ ಸ್ಥಳೀಯ ಶಾಸಕರ ಅವಶ್ಯಕತೆ ಇಲ್ಲ ಅನ್ಸುತ್ತೆ. ಬಿಜೆಪಿ ಕಾರ್ಯಕರ್ತರೇ ಸಾಕು ಎಂದು ಆಕ್ರೋಶ ಹೊರಹಾಕಿದ್ದಾರೆ.
ಇವಾಗ ಪ್ರದಕ್ಷಿಣೆ ಹಾಕಿ ಬಂದ್ರಲ್ಲ ಅವರಿಗೇನು ಗೊತ್ತಾಯಿತು. ನನ್ನ ಕ್ಷೇತ್ರದ ಸಮಸ್ಯೆ ನನಗೆ ಗೊತ್ತಿದೆ. ನನ್ನನ್ನೇ ಕಡೆಗಣಿಸಿದ್ರೆ ಹೆಂಗೆ? ಅವರು ಬಿಜೆಪಿ ಕಾರ್ಯಕರ್ತರನ್ನ ಕಟ್ಟಿಕೊಂಡು ಸುತ್ತಾಡ್ತಾ ಇದ್ದಾರೆ ಎಂದು ಕಿಡಿಕಾರಿದರು.
ಇನ್ನು, ಡಿಸಿ ವಿರುದ್ಧವೂ ಹರಿಹಾಯ್ದಿರುವ ಅವರು, ಬಿ.ಬಿ.ಕಾವೇರಿ ಬಂದು ಎರಡು ವರ್ಷವಾಗಿದೆ. ಆದರೆ ಜಿಲ್ಲೆಗೆ ಅವರ ಸಾಧನೆ ಶೂನ್ಯ. ಸುಳ್ವಾಡಿ ದುರಂತ ಮತ್ತು ಪ್ರವಾಹ ಸಂದರ್ಭದಲ್ಲಿ ಮಾತ್ರ ಉತ್ತಮವಾಗಿ ಕೆಲಸ ಮಾಡಿದ್ದಾರೆ ಎಂದರು.
ಸುರೇಶ್ ಕುಮಾರ್ ಸಮಜಾಯಿಷಿ: ಸಂವಹನ ಕೊರತೆಯಿಂದ ಪುಟ್ಟರಂಗಶೆಟ್ಟಿ ಅವರಿಗೆ ಮಾಹಿತಿ ನೀಡಿರಲಿಲ್ಲ. ನಾನೇ ಹೋಗಿ ಸ್ಪಷ್ಟನೆ ನೀಡಿದ್ದು, ಅವರು ಸಮಾಧಾನಗೊಂಡಿದ್ದಾರೆ ಎಂದಿದ್ದಾರೆ.