ಚಾಮರಾಜನಗರ: ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ತೆಗೆಯುವುದು ಸೂಕ್ತ ಎಂದು ಜಿಲ್ಲಾಧಿಕಾರಿಗೆ ತಿಳಿಸಿದ್ದು, ಸೋಮವಾರ ಅವರು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಜಿಲ್ಲಾ ಕೋವಿಡ್ ಉಸ್ತುವಾರಿ ಸಚಿವ ಸೋಮಶೇಖರ್ ತಿಳಿಸಿದ್ದಾರೆ.
ಜಿಲ್ಲಾಡಳಿತ ಭವನದಲ್ಲಿ ಕೋವಿಡ್ ತಡೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 15 ದಿನಗಳಿಂದ ಕೊರೊನಾ ಕೇಸ್ಗಳು ಇಳಿಕೆಯಾಗಿದ್ದು, ಕೆಲದಿನಗಳಿಂದ ಒಂದಂಕಿಯಲ್ಲಿ ಪ್ರಕರಣ ವರದಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಜನರ ನಿತ್ಯದ ಜೀವನಕ್ಕೆ ಮತ್ತು ವ್ಯಾಪಾರ - ವಹಿವಾಟಿಗೆ ತೊಂದರೆಯಾಗದಿರಲು ವೀಕೆಂಡ್ ಕರ್ಫ್ಯೂ ತೆರವುಗೊಳಿಸಲು ಶಿಫಾರಸು ಮಾಡಿದ್ದು, ಸೋಮವಾರದ ಬಳಿಕ ಮುಖ್ಯ ಕಾರ್ಯದರ್ಶಿಗೆ ತಿಳಿಸಿ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.
ಜಿಲ್ಲೆಯಲ್ಲಿ ದಿನವೊಂದಕ್ಕೆ 25 ಸಾವಿರ ಮಂದಿಗೆ ಲಸಿಕೆ ನೀಡಬೇಕು ಎಂದು ಸೂಚಿಸಿದ್ದು, ಗಡಿಭಾಗದ ಊರುಗಳಲ್ಲಿ ನೂರಕ್ಕೆ ನೂರರಷ್ಟು ಲಸಿಕೆ ಕೊಡಲು ಹೇಳಿದ್ದೇನೆ. ಜೊತೆಗೆ, ಶಾಲೆಗಳು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಕರು ಸೇರಿದಂತೆ ಸಿಬ್ಬಂದಿ ಲಸಿಕೆ ಪಡೆದಿರಬೇಕು. ಪಾಲಕರು ಯಾವುದೇ ಅಂಜಿಕೆ ಇಲ್ಲದೇ ಮಕ್ಕಳನ್ನು ಕಳುಹಿಸುವ ವಾತಾವರಣ ಇರಬೇಕು. ಎಲ್ಲಾದರೂ ಅಪವಾದ ಕಂಡರೆ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಎಚ್ಚರಿಸಿದರು.
ಮೈಸೂರು ಮೇಯರ್ ಸ್ಥಾನ ಪಡೆಯಲು ಯತ್ನ:
ಮೈಸೂರು ಪಾಲಿಕೆಯ ಮೇಯರ್ ಸ್ಥಾನವನ್ನು ಈ ಬಾರಿ ಪಡೆಯಲು ಪ್ರಯತ್ನ ನಡೆದಿದ್ದು, ಈಗಾಗಲೇ ಸಾ.ರಾ.ಮಹೇಶ್ ಜೊತೆ ಒಂದು ಸುತ್ತಿನ ಮಾತುಕತೆ ನಡೆದಿದೆ. ಇನ್ನೆರಡು ದಿನಗಳಲ್ಲಿ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ. ಜೆಡಿಎಸ್ನವರು ಮೂರು ಕಂಡಿಷನ್ಸ್ ಹಾಕಿದ್ದು, ನಾವು ಎರಡು ಕಂಡಿಷನ್ಸ್ ಹಾಕಿದ್ದೇವೆ. ಈ ಬಾರಿ ಅಧ್ಯಕ್ಷ ಸ್ಥಾನ ಸಿಗುವ ಅವಕಾಶ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.