ಚಾಮರಾಜನಗರ : ಸಿಎಂ ಅಧ್ಯಕ್ಷತೆಯಲ್ಲಿ ಗುರುವಾರ ಸಚಿವ ಸಂಪುಟ ಸಭೆ ಹಾಗೂ ನನ್ನ ಅಧ್ಯಕ್ಷತೆಯಲ್ಲಿ ಟಾಸ್ಕ್‌ಫೋರ್ಸ್ ಸಭೆ ನಡೆಯಲಿದೆ. ಲಾಕ್‌ಡೌನ್ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಆರೋಗ್ಯ ಸಚಿವ ಬಿ ಶ್ರೀರಾಮುಲು ತಿಳಿಸಿದರು.
ಅಧಿಕಾರಿಗಳ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲಾಕ್‌ಡೌನ್ ಮುಂದುವರೆಸುವ ಕುರಿತು ಮತ್ತು ರೆಡ್‌ಝೋನ್ ಪ್ರದೇಶಗಳ ಕುರಿತು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು. ಕೊರೊನಾ ವಿರುದ್ಧದ ಹೋರಾಟ ಒಬ್ಬರು ಮಾಡುವ ಕೆಲಸವಲ್ಲ, ಎಲ್ಲರೂ ಒಗ್ಗೂಡಿ ಮಾಡುವ ಕಾರ್ಯ ಎಂದು ಸಚಿವ ಡಾ. ಸುಧಾಕರ್ ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ, ಜನಪ್ರತಿನಿಧಿಗಳು ಜನರಲ್ಲಿ ವಿಶ್ವಾಸ ತುಂಬುವ ಕೆಲಸ ಮಾಡಬೇಕು ಎಂದರು.
ನಿಜಾಮುದ್ದೀನ್ ಸಭೆಗೆ ತೆರಳಿದವರು ಯಾರಾದರೂ ಇದ್ದರೇ ಸ್ವಯಂಪ್ರೇರಿತವಾಗಿ ಜಿಲ್ಲಾಡಳಿತದಲ್ಲಿ ಮಾಹಿತಿ ನೀಡಿ, ಬಚ್ಚಿಟ್ಟುಕೊಳ್ಳುವುದರಿಂದ ರೋಗ ಹೆಚ್ಚು ಹರಡಲಿದ್ದು ಸರ್ಕಾರ ನಿಮ್ಮ ಜೊತೆಗಿರಲಿದೆ ಎಂದು ಅವರು ಮನವಿ ಮಾಡಿಕೊಂಡರು. ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆಸಿರುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು. ಚಾಮರಾಜನಗರ ಅಂತರರಾಜ್ಯ ಗಡಿಗಳನ್ನು ಹಂಚಿಕೊಂಡರೂ ಕೊರೊನಾ ಮುಕ್ತ ಜಿಲ್ಲೆಯಾಗಿದೆ ಎಂದು ಜಿಲ್ಲಾಡಳಿತದ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.