ಚಾಮರಾಜನಗರ : ಮರಿ ರಾಜಾಹುಲಿ ಮೈಸೂರು-ಚಾಮರಾಜನಗರದ ಕಡೆ ವಿಶೇಷ ಗಮನ ಕೊಟ್ಟರೆ ಈ ಭಾಗದ 15 ಕ್ಷೇತ್ರದಲ್ಲಿ ಕಮಲ ಅರಳಲಿದೆ ಎನ್ನುವ ಮೂಲಕ ಮುಂದಿನ ಚುನಾವಣೆಗೆ ಮೈಸೂರಿನತ್ತ ಬರುವಂತೆ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರಗೆ ಸಚಿವ ಎಸ್.ಟಿ. ಸೋಮಶೇಖರ್ ಬಹಿರಂಗ ಆಹ್ವಾನ ನೀಡಿದರು.
ವಿಧಾನಪರಿಷತ್ ಚುನಾವಣೆ ಬಿಜೆಪಿ ಅಭ್ಯರ್ಥಿ ರಘು ಕೌಟಿಲ್ಯ ಪರ ನಗರದಲ್ಲಿ ನಡೆದ ಪ್ರಚಾರದ ವೇಳೆ ಸಚಿವ ಸೋಮಶೇಖರ್ ಮಾತನಾಡಿ, ನಾನು ಈ ಹಿಂದೆಯೂ ಹೇಳಿದ್ದೇನೆ. ಬಿ.ವೈ. ವಿಜಯೇಂದ್ರ ಅವರು ಮೈಸೂರು ಭಾಗದತ್ತ ಪಕ್ಷ ಸಂಘಟನೆಯ ಕಡೆಗೆ ಗಮನ ನೀಡಿದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಕ್ಲೀನ್ಸ್ವೀಪ್ ಮಾಡಲಿದೆ. ಈ ಭಾಗದಲ್ಲಿ ಬಿಜೆಪಿ ಶಕ್ತಿ ಇನ್ನಷ್ಟು ಹೆಚ್ಚಲಿದೆ ಎಂದರು.
ತ್ರಿಶಂಕು ಸ್ಥಿತಿಯಲ್ಲಿ ಜೆಡಿಎಸ್ ಅಭ್ಯರ್ಥಿ ಮಂಜೇಗೌಡ : ಜೆಡಿಎಸ್ ಅಭ್ಯರ್ಥಿ ಮಂಜೇಗೌಡರ ಬಗ್ಗೆ ವ್ಯಂಗ್ಯವಾಡಿದ ಸಚಿವ ಸೋಮಶೇಖರ್, ಮಂಜೇಗೌಡರು ಸಾ.ರಾ. ಮಹೇಶ್ ಜೊತೆ ಹೋದರೆ ಜಿ.ಟಿ. ದೇವೇಗೌಡ ಕಾಲೆಳೆಯುತ್ತಾರೆ. ಜಿಟಿಡಿಯನ್ನ ತಪ್ಪಿಸಿಕೊಂಡು ಪಿರಿಯಾಪಟ್ಟಣದತ್ತ ಹೋದರೆ ಅಲ್ಲಿ ಶಾಸಕ ಮಹಾದೇವ ಅವರ ಕಾಟ. ಇದು ಮಂಜೇಗೌಡರ ತೊಳಲಾಟ ಎಂದರು.
ಇದನ್ನೂ ಓದಿ: ಬೆಂಗಳೂರು : 5 ಕೆಜಿ ಚಿನ್ನ ಎಗರಿಸಿದ್ದ 7 ಖದೀಮರ ಗ್ಯಾಂಗ್ ಅಂದರ್!
ಇನ್ನು ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಬೇಕಾದರೆ ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಪ್ರಚಾರಕ್ಕೆ ಬರಬೇಕು. ಅವರು ಬಾರದಿದ್ದರೆ ಕಾಂಗ್ರೆಸ್ ಗೆಲ್ಲುವುದು ಕಷ್ಟ. ಇನ್ನು ಸಿದ್ದರಾಮಯ್ಯ ಬರುತ್ತಾರೋ ಇಲ್ಲವೋ ಅನುಮಾನ. ಹೀಗಿರಬೇಕಾದರೆ ಕಾಂಗ್ರೆಸ್ ಹೇಗೆ ತಾನೇ ಗೆಲ್ಲುತ್ತದೆ ಎಂದರು.
ಬಿಜೆಪಿಯ ಋಣ ನನ್ನ ಮೇಲಿದೆ : ಕಾಂಗ್ರೆಸ್ನಲ್ಲೇ ಇದ್ದಿದ್ದರೆ ನಾನು ಸಹಕಾರ ಸಚಿವನಾಗುತ್ತಿರಲಿಲ್ಲ. ನನ್ನನ್ನು ಚುನಾವಣೆಯಲ್ಲಿ ಗೆಲ್ಲಿಸಿ, ಸಚಿವನನ್ನಾಗಿ ಮಾಡಿದ ಬಿಜೆಪಿಯ ಋಣ ನನ್ನ ಮೇಲಿದೆ. ಆ ಋಣ ತೀರಿಸಲು ರಘು ಕೌಟಿಲ್ಯ ಅವರ ಗೆಲುವಿಗೆ ದುಡಿಯುತ್ತಿದ್ದೇನೆ. ಅವರು ಗೆದ್ದೇ ಗೆಲ್ಲುತ್ತಾರೆ ಎಂದರು.