ಚಾಮರಾಜನಗರ : ನಾನು ಮಂತ್ರಿ ಅಲ್ಲ, ಗೋ ಸೇವಕ. ನಾನು ಹೈಫೈ ಮಂತ್ರಿ ಅಲ್ಲ. ನಾನೊಬ್ಬ ಸಾಮಾನ್ಯ ಮಂತ್ರಿ, ಗೋ ಸಾಗಣೆ ತಡೆಗೆ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಿ ಎಂದು ಸಚಿವ ಪ್ರಭು ಚವ್ಹಾಣ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ‘ಗೋಹತ್ಯೆ ನಿಷೇಧ ಕಾಯಿದೆ’ ಅನುಷ್ಠಾನ ಸಂಬಂಧ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ರಾಜ್ಯಾದ್ಯಂತ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದಿದೆ. ಹೊರ ರಾಜ್ಯದ ಗಡಿಗಳನ್ನು ಹಂಚಿಕೊಂಡಿರುವ ಚಾಮರಾಜನಗರದ ವಿವಿಧ ಗಡಿ ಪ್ರದೇಶದ ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟುನಿಟ್ಟಿನ ಭದ್ರತೆ ಕೈಗೊಳ್ಳುವಂತೆ ಸೂಚಿಸಿದರು.
ಗೋ ಸಾಗಾಣಿಕೆಯ ಬಗ್ಗೆ ತೀವ್ರ ನಿಗಾವಹಿಸಬೇಕು. ಅದಕ್ಕಾಗಿ ಪಶು ಸಂಗೋಪನಾ ಇಲಾಖೆಯ ವೈದ್ಯರು, ಪೊಲೀಸ್ ಇಲಾಖೆ ಜತೆಗೂಡಿ ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟುನಿಟ್ಟಿನ ಭದ್ರತೆ ಕೈಗೊಳ್ಳಬೇಕು ಎಂದು ನಿರ್ದೇಶಿಸಿದರು. 1964ರ ಗೋ ಹತ್ಯೆ ನಿಷೇಧ ಕಾಯಿದೆಯಲ್ಲಿ ಏನಿತ್ತು?.
ಈಗ ತಂದಿರುವ ನೂತನ ಕಾಯ್ದೆಯಲ್ಲಿ ಏನಿದೆ ಎಂದು ಜಿಲ್ಲೆಯ ಐದು ತಾಲೂಕಿನ ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೆಶಕರನ್ನು ಪ್ರಶ್ನಿಸಿದರು. ಇದಕ್ಕೆ ಅಧಿಕಾರಿಗಳಿಂದ ಸರಿಯಾದ ಉತ್ತರ ಬರದಿದ್ದಕ್ಕೆ ಅಸಮಾಧಾನಗೊಂಡ ಸಚಿವರು, ಇಲಾಖೆಯ ಕಾಯ್ದೆಯ ಬಗ್ಗೆ ಎಳ್ಳಷ್ಟು ಮಾಹಿತಿ ಗೊತ್ತಿಲ್ಲವೆಂದರೆ ಏನು ಕೆಲಸ ಮಾಡುತ್ತೀರಿ. ಅಭಿವೃದ್ಧಿ ಹೇಗೆ ಮಾಡುತ್ತೀರಿ ಎಂದು ಪ್ರಶ್ನಿಸಿದ ಅವರು, ಇಂತಹ ಅಧಿಕಾರಿಗಳ ನಡೆಯಿಂದ ಇಲಾಖೆ ಹೀಗೆ ಹದಗೆಟ್ಟಿದೆ ಎಂದರು.