ಚಾಮರಾಜನಗರ: ಇಡೀ ರಾಜ್ಯದಲ್ಲಿ ಕೊರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ ಡಿಕೆಶಿ ಹಣ ಕೊಡಲಿ, ಕೇವಲ ಚಾಮರಾಜನಗರದ 36 ಜನರಿಗೆ ಮಾತ್ರ ಕೊಡುವುದಲ್ಲ ಎಂದು ಸಚಿವ ನಾರಾಯಣಗೌಡ ಆಕ್ರೋಶ ಹೊರಹಾಕಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆಮ್ಲಜನಕದ ಕೊರತೆಯಿಂದ ಮೃತಪಟ್ಟವರ ಮನೆಗೆ ಹೋಗಿ ಹಣ ಸಹಾಯದ ನೆಪದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಕೊರೊನಾದಿಂದ ಮೃತಪಟ್ಟ ಇಡೀ ರಾಜ್ಯದ ಸಂತ್ರಸ್ತರಿಗೆ ಹಣ ಕೊಡಲಿ, ಆಗ ನಾನು ಅವರನ್ನು ಅಭಿನಂದಿಸುತ್ತೇನೆ. ಚೂರು-ಪಾರು ಕೊಟ್ಟು ಪ್ರಚಾರ ತೆಗೆದುಕೊಳ್ಳುವುದಲ್ಲ ಎಂದು ಡಿಕೆಶಿ ಚಾಮರಾಜನಗರ ಭೇಟಿಗೆ ಟಾಂಗ್ ಕೊಟ್ಟರು.
ಆಮ್ಲಜನಕ ದುರಂತದ ಸಂತ್ರಸ್ತರಿಗೆ 2 ಲಕ್ಷ ರೂ. ಹಣ ಕೊಟ್ಟಿದ್ದೇವೆ. ವಿರೋಧ ಪಕ್ಷದವರು ಹೇಳಿದ್ರಾ ಹಣ ಕೊಡುವುದಕ್ಕೆ. ಯಡಿಯೂರಪ್ಪ ನಾಲ್ಕು ಬಾರಿ ಸಿಎಂ ಆದವರು, ಬೆಳಗ್ಗೆ 7 ರಿಂದ ರಾತ್ರಿ 10 ರವರೆಗೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಿಪಕ್ಷದವರ ಸಲಗೆ ಪಡೆದು ಆಡಳಿತ ನಡೆಸಬೇಕಾದ ಅವಶ್ಯಕತೆ ಇಲ್ಲ, ಡಿಕೆಶಿ ಸಿಎಂ ಸ್ವಪ್ನದಲ್ಲಿದ್ದಾರೆಂದು ಆಕ್ರೋಶ ಹೊರಹಾಕಿದರು.
ಚಾಮರಾಜನಗರಕ್ಕೆ ಸಿಎಂ ಬಾರದಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ಅವರಿಗೆ ಎರಡು ಬಾರಿ ಕೊರೊನಾ ಸೋಂಕು ತಗುಲಿದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವರುಗಳ ಒತ್ತಾಯದ ಮೇರೆಗೆ ಅವರು ಎಲ್ಲಿಗೂ ಭೇಟಿ ನೀಡುತ್ತಿಲ್ಲ, ಅವರಷ್ಟು ನಿರಂತರವಾಗಿ ಕರ್ತವ್ಯ ನಿರ್ವಹಿಸುತ್ತಿರುವವರು ಯಾರೂ ಇಲ್ಲ ಎಂದು ಜಾರಿಕೊಂಡರು.
ಕ್ರೀಡಾಂಗಣ ಕಾಮಗಾರಿ ಒಂದು ತಿಂಗಳಲ್ಲಿ ಪೂರ್ಣ: ಕಳೆದ 17 ವರ್ಷಗಳಿಂದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದ ಕಾಮಗಾರಿ ನಡೆಯುತ್ತಿದ್ದು, ಇನ್ನೊಂದು ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ಕೊಟ್ಟಿದ್ದಾರೆ, ಇನ್ನೂ 15 ದಿನ ಹೆಚ್ಚುವರಿಯಾಗಿ ತೆಗೆದುಕೊಂಡು ಕಾಮಗಾರಿ ಪೂರ್ಣಗೊಳಿಸಿ ಎಂದು ಸೂಚಿಸಿದ್ದೇನೆ ಎಂದರು.
ಪ್ರದೇಶಾಭಿವೃದ್ಧಿ ಅನುದಾನ ಬಳಕೆಯಲ್ಲಿ ಚಾಮರಾಜನಗರ ಜಿಲ್ಲೆ ಉತ್ತಮವಾಗಿದೆ, ಕೊರೊನಾ ತಡೆಗೆ ಇನ್ನು ಹೆಚ್ಚುವರಿಯಾಗಿ ಬೇಕಾದರೂ ಅನುದಾನ ಬಳಸಿಕೊಳ್ಳಿ ಎಂದು ಹೇಳಿದ್ದೇನೆ. ಎರಡನೇ ಅಲೆಯಲ್ಲಿ ನಮಗೆ ಬರಬೇಕಾದ ಆಮ್ಲಜನಕದ ಕೋಟಾವೇ ಬರುತ್ತಿರಲಿಲ್ಲ. ಈಗ ಸಮಸ್ಯೆಯಿಲ್ಲ, ನಮ್ಮ ಸರ್ಕಾರದ ಬಗ್ಗೆ ಮಾತನಾಡುವುದು ಬೇಡ ಎಂದು ಮಾತು ತುಂಡರಿಸಿದರು.