ಚಾಮರಾಜನಗರ: ಸಾಕು ಆನೆಗಳೇ ಒಮ್ಮೊಮ್ಮೆ ಹತ್ತಿರ ಹೋದವರನ್ನು ತನ್ನ ಸೊಂಡಿಲಿನಿಂದ ಎತ್ತಿ ಬಿಸಾಡಿರುವುದನ್ನು ನಾವು ಕಂಡಿರುತ್ತೇವೆ. ಇನ್ನೂ ಕಾಡಾನೆಗಳು ಎದುರು ಬಂದ್ರೆ ಬೆವರಿಳಿಯೋದ್ರಲ್ಲಿ ಡೌಟೇ ಇಲ್ಲ. ಆದರೆ ಇಲ್ಲೋರ್ವ ಭೂಪ ಒಂಟಿ ಸಲಗಕ್ಕೆ ಅಡ್ಡಬಿದ್ದು ಎಲ್ಲರ ಹುಬ್ಬೇರಿಸಿದ್ದಾನೆ.
ಹೌದು, ಮಧ್ಯವಯಸ್ಕ ವ್ಯಕ್ತಿವೋರ್ವ ಒಂಟಿ ಸಲಗಕ್ಕೆ ನಮಸ್ಕರಿಸಲು ಮುಂದಾಗಿದ್ದಾನೆ. ಈತ ಅಡ್ಡ ಬೀಳುವುದನ್ನು ಕಂಡ ಆನೆ ಗಲಿಬಿಲಿಗೊಂಡು ಕಾಡಿನೊಳಕ್ಕೆ ಹಿಂದಿರುಗಿರುವ ಘಟನೆ ಚಾಮರಾಜನಗರ ಗಡಿ ಕಾರೆಪಾಳ್ಯ ಸಮೀಪ ಬುಧವಾರದಂದು ನಡೆದಿದೆ.
ಈ ಮಾರ್ಗದಲ್ಲಿ ರಾತ್ರಿ ಸಂಚಾರ ನಿರ್ಬಂಧದಿಂದ ಟ್ರಾಫಿಕ್ ಜಾಂ ಉಂಟಾಗಿ ಎಲ್ಲಾ ಲಾರಿಗಳು ಸಾಲಾಗಿ ನಿಲ್ಲಿಸಿಕೊಂಡಿದ್ದ ವೇಳೆ ಎಂದಿನಂತೆ ಕಬ್ಬಿಗಾಗಿ ಆನೆಯೊಂದು ರಸ್ತೆ ಬದಿ ಬಂದು ನಿಂತಿದೆ. ಆ ವೇಳೆ ದಿಢೀರನೇ ಎಂಟ್ರಿ ಕೊಟ್ಟ ವ್ಯಕ್ತಿಯೋರ್ವ ಆನೆ ಬಳಿ ತೆರಳಿ ಕೈ ಮುಗಿದು ಅಡ್ಡಬಿದ್ದಿದ್ದಾನೆ.
ಆನೆ ಒಮ್ಮೆ ಕೂಗಿ ಕೋಪ ತೋರಿಸಿದರೂ ಬಿಡದ ಈತ ಆನೆಯನ್ನು ಹಿಂಬಾಲಿಸಿ ಮತ್ತೊಮ್ಮೆ ಆನೆಯೆದುರು ಅಡ್ಡ ಬಿದ್ದಿದ್ದಾನೆ. ಆನೆ ದಾಳಿ ಮಾಡಲು ಮುಂದಾದರೂ ಚಲಿಸದೇ ನಿರ್ಭೀತಿಯಾಗಿ ನಿಂತಿದ್ದ ಈತನ ವರ್ತನೆಯಿಂದ ಗಲಿಬಿಲಿಗೊಂಡ ಸಲಗ ಕಾಡಿನತ್ತ ಮರಳಿದೆ.
ಇದನ್ನೂ ಓದಿ: ಆಟೋ ರಿಕ್ಷಾ ಮಾಲೀಕರಿಗೆ ಬಿಗ್ ಶಾಕ್ ಕೊಟ್ಟ ರಾಜ್ಯ ಸರ್ಕಾರ
ಇನ್ನು ಈ ವ್ಯಕ್ತಿ ಈಶಾನ್ಯ ರಾಜ್ಯದವನಂತೆ ಕಂಡುಬರುತ್ತಿದ್ದು ಮಾನಸಿಕ ಅಸ್ವಸ್ಥನೋ ಅಥವಾ ಮಾದಕ ವಸ್ತು ಸೇವಿಸಿದ್ದನೋ ಎಂಬುದು ತಿಳಿದುಬಂದಿಲ್ಲ. ಅಲ್ಲಿದ್ದ ಲಾರಿ ಚಾಲಕರು ಈ ವಿಡಿಯೋ ಸೆರೆ ಹಿಡಿದಿದ್ದಾರೆ. ಆನೆ ಬಳಿ ಹೋಗದಂತೆ ಸಾಕಷ್ಟು ಬಾರಿ ಕೂಗಿ ಕರೆಯುವುದು ಕೂಡ ವಿಡಿಯೋದಲ್ಲಿ ಸೆರೆಯಾಗಿದೆ.