ಚಾಮರಾಜನಗರ : ಕಳೆದ ನಾಲ್ಕು ದಿನಗಳ ಹಿಂದೆ ಚಾಮರಾಜನಗರ ಮೆಡಿಕಲ್ ಕಾಲೇಜಿನ ಕೋವಿಡ್ ಕೇರ್ ಸೆಂಟರ್ನಿಂದ ಕೊರೊನಾ ಸೋಂಕಿತ ವ್ಯಕ್ತಿಯೊಬ್ಬರು ನಾಪತ್ತೆಯಾಗಿ ಬಳಿಕ ಪರಿಚಯಸ್ಥರ ಸಹಾಯದಿಂದ ಮನೆ ಸೇರಿರುವ ಘಟನೆ ನಡೆದಿದೆ. ಚಾಮರಾಜನಗರ ತಾಲೂಕಿನ ಕಟ್ನವಾಡಿ ಗ್ರಾಮದ ಲಿಂಗರಾಜಪ್ಪ(63) ನಾಪತ್ತೆಯಾಗಿದ್ದ ಕೊರೊನಾ ಸೋಂಕಿತ ವ್ಯಕ್ತಿ.
ಲಿಂಗರಾಜಪ್ಪಗೆ ಕೊರೊನಾ ಸೋಂಕು ತಗುಲಿದೆ ಎಂದು ಜೂನ್ 24ರಂದು ಮೆಡಿಕಲ್ ಕಾಲೇಜಿನ ಕೋವಿಡ್ ಕೇರ್ ಸೆಂಟರ್ಗೆ ಕರೆದುಕೊಂಡು ಬಂದಿದ್ದಾರೆ. ಬಳಿಕ ಜೂನ್ 25ರಂದು ಅವರನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಸೇರಿಸಲು ಆ್ಯಂಬುಲೆನ್ಸ್ನಲ್ಲಿ ಕರೆತಂದು ಆಸ್ಪತ್ರೆಗೂ ದಾಖಲಿಸದೇ ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ.
ಜೂನ್ 27ರಂದು ಲಿಂಗರಾಜಪ್ಪರ ಪತ್ನಿ ತನ್ನ ಪತಿಯನ್ನು ನೋಡಲು ಬಂದಾಗ ಕೇರ್ ಸೆಂಟರ್ನಲ್ಲಾಗಲಿ, ಆಸ್ಪತ್ರೆಯಲ್ಲಾಗಲಿ ಇಲ್ಲದಿರುವುದು ಕಂಡು ಬಂದಿದೆ. ಅಧಿಕಾರಿಗಳನ್ನು ವಿಚಾರಿಸಿದರೆ ಪತಿ ಕಾಣಿಸುತ್ತಿಲ್ಲವೆಂದರೆ ಪೊಲೀಸ್ ಠಾಣೆಗೆ ದೂರು ನೀಡಿ ಎಂದು ನಿರ್ಲಕ್ಷ್ಯದ ಮಾತುಗಳನ್ನಾಡಿ ನುಣುಚಿಕೊಂಡಿದ್ದಾರೆ. ವಿಧಿಯಿಲ್ಲದೇ ಪರಿಚಯಸ್ಥರು ಚಾಮರಾಜನಗರ ಊರ್ದಳ್ಳಿ ಬಸ್ ನಿಲ್ದಾಣದಲ್ಲಿ ನಿತ್ರಾಣ ಸ್ಥಿತಿಯಲ್ಲಿದ್ದ ಲಿಂಗರಾಜಪ್ಪರನ್ನು ಮನೆಗೆ ಕರೆದೊಯ್ದಿದ್ದಾರೆ.
ರೈತ ಸಂಘ ಪ್ರತಿಭಟನೆ : ಒಬ್ಬ ಸೋಂಕಿತನನ್ನು ನೋಡಿಕೊಳ್ಳದೆ ಬೇಜವಾಬ್ದಾರಿತನ ತೋರಿರುವ ಕೋವಿಡ್ ಕೇರ್ ಸೆಂಟರ್ ಅಧಿಕಾರಿ, ಸಿಬ್ಬಂದಿ ಹಾಗೂ ನೋಡಲ್ ಅಧಿಕಾರಿ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರೈತ ಮುಖಂಡ ಗುರುಪ್ರಸಾದ್ ನೇತೃತ್ವದಲ್ಲಿ ಇಂದು ಡಿಸಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ಡಿಸಿ, ಡಿಎಚ್ಒ, ಡೀನ್ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನಾಕಾರರು ಆಕ್ರೋಶ ಹೊರ ಹಾಕಿದ್ದಾರೆ.