ಚಾಮರಾಜನಗರ: ಬಿಳಿಗಿರಿ ರಂಗನಾಥಸ್ವಾಮಿ ಹುಲಿ ಸಂರಕ್ಷಿತ ಪ್ರದೇಶದಲ್ಲಿನ ಕೆ.ಗುಡಿಯಲ್ಲಿರುವ ಗಜೇಂದ್ರನಿಗೆ ಕಾಡಾನೆಯೊಂದು ತಿವಿದು ಗಾಯಗೊಳಿಸಿರುವ ಘಟನೆ ನಡೆದಿದೆ.
ಕೆ.ಗುಡಿ ಕ್ಯಾಂಪಿನ ತುಸು ದೂರದಲ್ಲಿ ಮೇಯುತ್ತಿದ್ದ ಗಜೇಂದ್ರ ಮತ್ತು ಮಸ್ತಿಯಲ್ಲಿದ್ದ ಒಂಟಿಸಲಗವೊಂದಕ್ಕೆ ಕಾಳಗ ಏರ್ಪಟ್ಟು ಗಜೇಂದ್ರನ ಮುಂಭಾಗದ ಬಲಗಾಲಿನ ಪಕ್ಕೆಲೆಬಿಗೆ ಗಾಯವಾಗಿದೆ. ಇದನ್ನು ಗಮನಿಸಿದ ಮಾವುತರು ಅಧಿಕಾರಿಗಳ ಗಮನಕ್ಕೆ ತಂದು ಚಿಕಿತ್ಸೆ ಕೊಡಿಸಿದ್ದಾರೆ.
ಗಾಯದಿಂದ ಚೇತರಿಸಿಕೊಳ್ಳಲು ಪ್ರೋಟಿನ್ಯುಕ್ತ ಆಹಾರ ನೀಡಲು ವೈದ್ಯರು ಸಲಹೆ ನೀಡಿದ್ದು, ಇನ್ನೂ 3-4 ದಿನ ಆನೆಯನ್ನು ಮೇಯಲು ಕಾಡಿಗೆ ಕಳುಹಿಸದಂತೆ ಸೂಚಿಸಿದ್ದಾರೆ. ದಸರಾ ಆನೆ ಗಜೇಂದ್ರನಿಗೆ ಯಾವುದೇ ಪ್ರಾಣಾಪಾಯವಿಲ್ಲ ಎಂದು ಮೂಲಗಳು ತಿಳಿಸಿವೆ.