ಚಾಮರಾಜನಗರ: ತೀವ್ರ ಕುತೂಹಲ ಕೆರಳಿಸಿರುವ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದೆ. ಮತ ಎಣಿಕೆ ಕೇಂದ್ರದಲ್ಲಿ ಭಾರಿ ಭದ್ರತೆ ಏರ್ಪಡಿಸಲಾಗಿದೆ.
ಮತ ಎಣಿಕೆ ಕೇಂದ್ರದಲ್ಲಿ 600ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. 3 ಹಂತಗಳಲ್ಲಿ ತಪಾಸಣೆ ನಡೆಸಲಾಗುತ್ತದೆ. ಈ ಬಾರಿ ಮತ ಎಣಿಕೆ ಕೇಂದ್ರಗಳಿಗೆ ಕಟ್ಟುನಿಟ್ಟಾಗಿ ಮೊಬೈಲ್ಗಳನ್ನು ನಿಷೇಧಿಸಲಾಗಿದೆ. ಡಿಸಿ, ಎಸ್ಪಿ, ಎಆರ್ಒಗಳು ಹಾಗೂ ಮಾಧ್ಯಮ ಕೇಂದ್ರದಲ್ಲಿ ಪತ್ರಕರ್ತರಿಗೆ ಮಾತ್ರ ಮೊಬೈಲ್ ಬಳಸಲು ಅವಕಾಶ ಕಲ್ಪಿಸಲಾಗಿದೆ.
21 ಸುತ್ತುಗಳಲ್ಲಿ ಮತ ಎಣಿಕೆ :
ಹೆಚ್‌ಡಿಕೋಟೆ ವಿಧಾನಸಭೆ ಕ್ಷೇತ್ರದ ಮತ ಎಣಿಕೆ ಕಾರ್ಯಕ್ಕೆ 14 ಟೇಬಲ್, ನಂಜನಗೂಡು ಕ್ಷೇತ್ರದ ಮತ ಎಣಿಕೆ ಕಾರ್ಯಕ್ಕೆ 14, ವರುಣ ಕ್ಷೇತ್ರದ ಮತ ಎಣಿಕೆಗೆ 14, ಟಿ. ನರಸೀಪುರ ಕ್ಷೇತ್ರದ ಮತ ಎಣಿಕೆ ಕಾರ್ಯಕ್ಕೆ 6 ಟೇಬಲ್ ಹಾಕಲಾಗಿದ್ದು, ಸಿವಿಲ್ ಬ್ಲಾಕ್ ನೆಲಮಹಡಿಯಲ್ಲಿ ಮತ ಎಣಿಕೆ ನಡೆಯಲಿದೆ. ಇನ್ನೂ ಹನೂರು ಕ್ಷೇತ್ರದ ಮತ ಎಣಿಕೆ ಕಾರ್ಯಕ್ಕೆ 14 ಟೇಬಲ್, ಕೊಳ್ಳೇಗಾಲ ಕ್ಷೇತ್ರದ ಮತ ಎಣಿಕೆಗೆ 14, ಚಾಮರಾಜನಗರ ವಿಧಾನಸಭೆ ಕ್ಷೇತ್ರದ ಮತ ಎಣಿಕೆಗೆ 14, ಗುಂಡ್ಲುಪೇಟೆ ವಿಧಾನಸಭೆ ಕ್ಷೇತ್ರದ ಮತ ಎಣಿಕೆ ಕಾರ್ಯಕ್ಕೆ 14 ಟೇಬಲ್‌ಗಳನ್ನ ಮೆಕ್ಯಾನಿಕಲ್ ಬ್ಲಾಕ್‌ನ 1ನೇ ಮಹಡಿಯಲ್ಲಿ ಹಾಕಲಾಗಿದ್ದು, ಮತ ಎಣಿಕೆ ನಡೆಯಲಿದೆ. ಹೀಗೆ ಒಟ್ಟು 110 ಟೇಬಲ್‌ಗಳಲ್ಲಿ 21 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ. ಮತ ಎಣಿಕೆಯ ವೇಳೆ ಫಲಿತಾಂಶದ ಕುರಿತು ಕುತೂಹಲ ದುಪ್ಪಟ್ಟಾಗಲಿದೆ.