ಚಾಮರಾಜನಗರ : ಬಿಲ್ ಮಂಜೂರು ಮಾಡಲು ಗುತ್ತಿಗೆದಾರನಿಂದ ಲಂಚಕ್ಕೆ ಬೇಡಿಕೆ ಇಟ್ಟು ಹಣ ಪಡೆಯುವಾಗ ಇಬ್ಬರು ಇಂಜಿನಿಯರ್‌ಗಳು ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿರುವ ಘಟನೆ ಚಾಮರಾಜನಗರ ತಾಲೂಕಿನ ಬಾಗಳಿ ಗ್ರಾಮದ ಸಮೀಪ ಇಂದು (ಶುಕ್ರವಾರ) ರಾತ್ರಿ ನಡೆದಿದೆ.
ಚಾಮರಾಜನಗರ ಲೋಕೋಪಯೋಗಿ ಇಲಾಖೆಯ ಎಇಇ ಕೆಂಪರಾಜು ಹಾಗೂ ಎಇ ಲಂಚ ಸ್ವೀಕರಿಸಿದ ಆರೋಪಿಗಳು.
ಚಾಮರಾಜನಗರದ ಗುತ್ತಿಗೆದಾರ ಸುನೀಲ್ ಕುಮಾರ್ ಎಂಬವರು ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಲೆಗೆ ಕೆಡವಿದ್ದಾರೆ. ಬಾಗಳಿ ಗ್ರಾಮದಲ್ಲಿ ನಿರ್ಮಿಸಿದ್ದ ಶಾಲಾ ಕಟ್ಟಡಕ್ಕೆ ಬಿಲ್ ಮಂಜೂರಾತಿ ಮಾಡಲು 30 ಸಾವಿರ ಹಣಕ್ಕೆ ಬೇಡಿಕೆ ಇಟ್ಟು, ಸಂಪೂರ್ಣ 30 ಸಾವಿರ ರೂ. ಹಣವನ್ನು ಪಡೆದಿದ್ದಾರೆ. ಲೋಕಾಯುಕ್ತ ಪೊಲೀಸರನ್ನು ಕಂಡು ಕಾಲ್ಕೀಳುವಾಗ ಹಿಂಬಾಲಿಸಿ ಇಬ್ಬರನ್ನು ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಇಬ್ಬರೂ ಆರೋಪಿಗಳು ಲೋಕಾಯುಕ್ತ ಪೊಲೀಸರ ವಶದಲ್ಲಿದ್ದು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಎಇಇ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ದಾಳಿ : ಮೈಸೂರಿನ ವಿಜಯನಗರ ಬಡಾವಣೆಯಲ್ಲಿ ವಾಸವಿರುವ ಎಇಇ ಅಧಿಕಾರಿ ತಮ್ಮ ಮನೆಯಲ್ಲೇ ವ್ಯಕ್ತಿಯೊಬ್ಬರಿಂದ 2 ಲಕ್ಷ ರೂಪಾಯಿ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಚಾರ್ಜಿಂಗ್ ಪಾಯಿಂಟ್ಗೆ ಅನುಮತಿ ನೀಡಲು ಲಂಚ ಪಡೆಯುತ್ತಿದ್ದರು ಎಂದು ತಿಳಿದು ಬಂದಿದೆ. ಆರೋಪಿಯನ್ನು ಬಂಧಿಸಿರುವ ಲೋಕಾಯುಕ್ತ ಪೊಲೀಸ್ ಅಧಿಕಾರಿ, ತನಿಖೆ ಮುಂದುವರೆಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಲೀಸರಿಂದ ಸುಲಿಗೆ : ಶಿರಾ ತಾಲೂಕಿನ ವ್ಯಾಪ್ತಿಯಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ, ಲಾರಿಗಳನ್ನು ತಡೆದು ಓರ್ವ ಎಎಸ್ಐ ಹಾಗು ಪೊಲೀಸ್ ಜೀಪ್ ಚಾಲಕ ಹಣ ವಸೂಲಿ ಮಾಡುತ್ತಿದ್ದರು. ಲಾರಿ ಚಾಲಕರಿಂದ ಹಣ ಪಡೆಯುವ ದೃಶ್ಯ ಮೊಬೈಲ್ನಲ್ಲಿ ಸೆರೆ ಹಿಡಿಯಲಾಗಿದ್ದು, ವಿಡಿಯೋ ಬಾರಿ ವೈರಲ್ ಆಗುತ್ತಿದ್ದಂತೆ ಜಿಲ್ಲಾ ಪೊಲೀಸ್ ಇಲಾಖೆ, ಸಿಬ್ಬಂದಿಯ ವಿರುದ್ಧ ಅಮಾನತು ಆದೇಶ ಹೊರಡಿಸಿ ಕಠಿಣ ಕ್ರಮ ಕೈಗೊಂಡಿದೆ. ಕಳ್ಳಂಬೆಳ್ಳ ಠಾಣೆಯ ಎಎಸ್ಐ ಚಿದಾನಂದ ಸ್ವಾಮಿ, ಹಾಗೂ ಪೊಲೀಸ್ ಜೀಪ್ ಚಾಲಕ ಚಿಕ್ಕ ಹನುಮಯ್ಯ ಅಮಾನತು ಆಗಿದ್ದಾರೆ. ತುಮಕೂರು ಎಸ್ಪಿ ರಾಹುಲ್ ಕುಮಾರ್ ಶಹಪುರ್ ವಾಡ್ ಆದೇಶ ಹೊರಡಿಸಿದ್ದಾರೆ.
ಲಾರಿಗಳನ್ನು ತಡೆದು 200, 300 ರೂಪಾಯಿ ಹಣ ವಸೂಲಿ ಮಾಡುತ್ತಿದ್ದ ಪೊಲೀಸರಿಗೆ ಕ್ಲಾಸ್ ತೆಗೆದುಕೊಂಡಿದ್ದ ಸಾರ್ವಜನಿಕರು, ಪೊಲೀಸರು ಹಣ ಪಡೆಯುವ ದೃಶ್ಯ ಶೂಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದರು. ಈ ಬಗ್ಗೆ ವರದಿ ನೀಡುವಂತೆ ಶಿರಾ ಪೊಲೀಸ್ ಇನ್ಸ್ಪೆಕ್ಟರ್ಗೆ ತುಮಕೂರು ಎಸ್ಪಿ ರಾಹುಲ್ ಕುಮಾರ್ ಶಹಪುರ್ ವಾಡ್ ಸೂಚನೆ ನೀಡಿದ್ದರು. ವರದಿಯಲ್ಲಿ ಪೊಲೀಸರು ಹಣ ಪಡೆಯುವುದು ಸಾಬೀತಾದ ಹಿನ್ನೆಲೆಯಲ್ಲಿ ಚಿದಾನಂದ ಸ್ವಾಮಿ ಹಾಗೂ ಚಿಕ್ಕಹನುಮಯ್ಯರನ್ನು ಅಮಾನತು ಮಾಡಲಾಗಿದೆ.
ಇದನ್ನೂ ಓದಿ : Lokayukta raid: ಮೈಸೂರಿನಲ್ಲಿ ₹2 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತರ ಕೈಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಎಇಇ