ಚಾಮರಾಜನಗರ: ಲಾಕ್ಡೌನ್ ಸಡಿಲಿಕೆ ಬಳಿಕ ಆಲೆ ಮನೆಗಳು ಶುರುವಾಗಿ ಕಾರ್ಮಿಕರು ಈಗಷ್ಟೇ ಕಾಸು ಕಾಣುತ್ತಿರುವುದರಿಂದ ವಿವಿಧ ಆಲೆ ಮನೆಗಳಿಗೆ ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಬೆಲ್ಲ ಹೇಗೆ ತಯಾರಿಸುತ್ತಾರೆ ಎಂಬ ಜಿಲ್ಲಾಧಿಕಾರಿ ಕುತೂಹಲಕ್ಕೆ ಕಾರ್ಮಿಕರು ಸಿಹಿ ಪಾಠ ಮಾಡಿದರು. ಕೊಪ್ಪರಿಗೆಯಲ್ಲಿ ಕಬ್ಬಿನ ಹಾಲನ್ನು ಕುದಿಸುವುದು, ಮಡ್ಡಿ ತೆಗೆಯಲು ಬಳಸುವ ಪೌಡರ್ ಕುರಿತು ಡಿಸಿಗೆ ಮಾಹಿತಿ ನೀಡಿದರು. ಬಳಿಕ, ಬೆಲ್ಲದ ಅಚ್ಚನ್ನು ಮಾಡುವ ರೀತಿ ಅದನ್ನು ಪಿಂಡಿ ಕಟ್ಟುವುದನ್ನು ವೀಕ್ಷಿಸಿದ ಜಿಲ್ಲಾಧಿಕಾರಿ, ಮಾರುಕಟ್ಟೆ, ಬಂಡವಾಳಕ್ಕೆ ಸರಿಯಾದ ಪ್ರತಿಫಲ, ಲಾಭದ ಕುರಿತು ಆಲೆ ಮನೆ ಮಾಲೀಕರ ಅಳಲು ಆಲಿಸಿದರು.
ಇದಕ್ಕು ಮುನ್ನ ಕೊಳ್ಳೇಗಾಲ ತಾಲೂಕಿನ ಕುಂತೂರಿನ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಗೆ ಭೇಟಿ ನೀಡಿ ಸಕ್ಕರೆ ಉತ್ಪಾದನೆ, ಪ್ರಮಾಣ, ಕಾರ್ಮಿಕರ ನಿಯೋಜನೆ, ಕಾರ್ಖಾನೆಯ ಕಾರ್ಯ ಅವಧಿ ಬಗ್ಗೆ ಮಾಹಿತಿ ಪಡೆದರು.