ಚಾಮರಾಜನಗರ : ನಮ್ಮ ಪೂರ್ವಜರು ನಿತ್ಯದ ಬದುಕಿನಲ್ಲಿ ಕೇವಲ ಸೀಮೆಎಣ್ಣೆ ಬುಡ್ಡಿ ಅಥವಾ ಹತ್ತಿ ಬತ್ತಿಯ ಹಣತೆಗಳನ್ನೇ ಆಶ್ರಯಿಸುತ್ತಿರಲಿಲ್ಲ. ಬದಲಾಗಿ ಮರದ ಮೊಗ್ಗುಗಳನ್ನು ಕೂಡಾ ದೀಪದ ಬತ್ತಿಯಾಗಿ ಉಪಯೋಗಿಸುತ್ತಿದ್ದರು..
ಇದರ ಹೆಸರು ಕರಿಕಲುಮರ. ಕೈಕರಿಕಲು ಮರ ಎಂತಲೂ ಕರೀತಾರೆ. ಪಾಂಡವರ ಬತ್ತಿ ಮರವೆಂದು ಇದು ಪುರಾಣ ಪ್ರಸಿದ್ಧ. ಈ ಮರ, ಅರಣ್ಯಪ್ರದೇಶಗಳಲ್ಲಿ ಕಾಣಸಿಗುತ್ತದೆ. ಅದೇ ರೀತಿ, ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲೂ ಈ ಮರಗಳಿದ್ದು, ತೇಗಿನ ಜಾತಿಗೆ ಸೇರಿದ ಪ್ರಭೇದ ಅಂತಾರೆ ಪರಿಸರ ತಜ್ಞರು. ಕರಿಕಲು ಮರದ ಮೊಗ್ಗುಗಳು ಎಷ್ಟು ಬೆಳಕು ನೀಡುತ್ತವೋ, ಇವುಗಳಲ್ಲರಳುವ ಹೂಗಳು ಅಷ್ಟೇ ಸುವಾಸನೆಭರಿತವಾಗಿವೆ. ಈ ಮರದಲ್ಲರಳುವ ಹೂವಿನ ಮೊಗ್ಗುಗಳಿಗೆ ಎಣ್ಣೆಯನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಇದೆ. ಹೀಗಾಗಿಯೇ ಎಲೆಗಳು ತಾಸುಗಟ್ಟಲೆ ಉರಿಯಬಲ್ಲವು ಎಂಬುದು ಮತ್ತೊಂದು ಅಚ್ಚರಿ.
ಮರದ ಎಲೆಗಳಲ್ಲಿ ಹೊಟ್ಟಿನ ರೀತಿ ಒಂದು ವಸ್ತು ಉತ್ಪತ್ತಿಯಾಗುವುದರಿಂದ ಹತ್ತಿ ದೀಪದಂತೆ ಈ ಮರದ ಎಲೆಗಳು ಉರಿಯುತ್ತವೆ. ಇದರ ಮೊಗ್ಗಿಗೆ ಎಣ್ಣೆ ಸವರಿ ಹೊತ್ತಿಸಿದಾಗಲೂ ಕೂಡ ಹಣತೆಯಂತೆ ಉರಿಯಲಿದ್ದು, ಬೇರಿನ್ಯಾವ ಮರದ ಮೊಗ್ಗುಗಳಿಗೂ ಈ ವಿಶಿಷ್ಟತೆ ಇದುವರೆಗೂ ಕಂಡು ಬಂದಿಲ್ಲ. ಕಾಡಿನಲ್ಲಿ ವಾಸಿಸುವ ಗಿರಿಜನರು ಸೀಮೆಎಣ್ಣೆ ಬುಡ್ಡಿ, ಹಣತೆ ಬದಲಿಗೆ ಈ ಮೊಗ್ಗಿಗೆ ಹರಳೆಣ್ಣೆ, ಇಲ್ಲವೇ ಎಳ್ಳಣ್ಣೆಯನ್ನು ಸವರಿ ರಾತ್ರಿ ವೇಳೆ ಮನೆಯೊಳಗೆ ಉರಿಸುತ್ತಿದ್ದರು. ಮನುಷ್ಯ ಆಧುನಿಕತೆಗೆ ಒಡ್ಡಿಕೊಂಡಂತೆ ಈ ಮೊಗ್ಗು ತೆರೆಗೆ ಸರಿದು ಲ್ಯಾಂಪ್ಗಳು ಬಂದಿವೆ ಎನ್ನುತ್ತಾರೆ ಸೋಲಿಗ ಮುಖಂಡ ಡಾ. ಮಾದೇಗೌಡ.
ಕರಿಕಲು ಮರಕ್ಕೆ ಮಹಾಭಾರತದ ವನವಾಸದ ಕಥೆಯೂ ತಳಕು ಹಾಕಿಕೊಂಡಿದೆ. ಪಾಂಡವರು ವನವಾಸದಲ್ಲಿದ್ದ ವೇಳೆ ಬುಡಕಟ್ಟು ಮಹಿಳೆಯೋರ್ವಳಿಂದ ದ್ರೌಪದಿ ಈ ಮರದ ಮೊಗ್ಗಿನ ಬಗ್ಗೆ ತಿಳಿದುಕೊಂಡಳಂತೆ. ಹಸ್ತಿನಾವತಿಯಿಂದ ತಂದಿದ್ದ ಎಣ್ಣೆಬತ್ತಿಗಳು ಮುಗಿಯುವ ಹಂತಕ್ಕೆ ಬಂದಾಗ ಬುಡಕಟ್ಟು ಜನರು ಉಪಯೋಗಿಸುತ್ತಿದ್ದ ಈ ಮೊಗ್ಗು ನೆನಪಿಗೆ ಬಂದು, ಭೀಮನ ಮೂಲಕ ಕರಿಕಲು ಮರದ ಮೊಗ್ಗುಗಳನ್ನು ತರಿಸಿಕೊಂಡು, ಹಣತೆ ಹೊತ್ತಿಸಿದಳು ಎಂಬ ಐತಿಹ್ಯವೂ ಇದೆ ಎನ್ನುತ್ತಾರೆ ವಿಜಿಕೆಕೆಯ ಶಿಕ್ಷಕ ರಾಮಾಚಾರಿ.
ಈ ಪಾಂಡವರ ಬತ್ತಿ ಮರ ಬೆಳಕು ನೀಡುವುದಷ್ಟೇ ಅಲ್ಲದೆ ಕಾಡಿನ ಮಕ್ಕಳ ಬದುಕಿಗೂ ಆಸರೆಯಾಗಿದೆ. ಈ ಮರದ ಹೂಗಳು ಹೆಚ್ಚು ಸುವಾಸನೆಯಿಂದ ಕೂಡಿರುವುದರಿಂದ ಜೇನುನೊಣಗಳು ಮಕರಂದ ಹೀರಿ ಕೆಲವೊಮ್ಮೆ ಮರದಲ್ಲಿ ಗೂಡು ಕಟ್ಟುತ್ತದೆ. ಸೋಲಿಗರ ಜೇನು ಸಂಗ್ರಹಕ್ಕೆ ಈ ಮರ ಅತ್ಯವಶ್ಯಕ. ರೊಟ್ಟಿ ಹಬ್ಬದ ವೇಳೆ ಈ ಮರದ ಎಲೆಗಳಿಂದ ರೊಟ್ಟಿ ತಯಾರಿಸುತ್ತಾರೆ. ಸಾಮಾನ್ಯ ದಿನಗಳಲ್ಲಿ ಮುದ್ದೆಯನ್ನೂ ತಯಾರಿಸಿ ಈ ಎಲೆಯಲ್ಲಿ ಊಟ ಮಾಡುವ ಪರಿಪಾಠ ಇಂದಿಗೂ ಮುಂದುವರೆದಿದೆ.
ಈಟಿವಿ ಭಾರತ ಈ ಅಪರೂಪದ ಮರದ ಕುರಿತು ವರದಿ ಮಾಡಲು ತೆರಳಿದ್ದ ವೇಳೆ ಬೇರೆ ಬೇರೆ ಹತ್ತಾರು ಗಿಡದ ಎಲೆಗಳು ಹಾಗೂ ಮೊಗ್ಗುಗಳಿಗೆ ಹರಳೆಣ್ಣೆ ಹಚ್ಚಿ ದೀಪ ಹೊತ್ತಿಸಿತಾದರೂ ಯಾವುದೂ ಉರಿಯಲಿಲ್ಲ. ಆದರೆ, ಪಾಂಡವರಬತ್ತಿಯ ಹಸಿ ಎಲೆಗಳು ಪ್ರಜ್ವಲಿಸಿ ಉರಿದದ್ದು ಪ್ರಕೃತಿಯ ವೈಶಿಷ್ಟ್ಯತೆಗೆ ಸಾಕ್ಷಿ.