ಚಾಮರಾಜನಗರ: ವಿದ್ಯಾರ್ಥಿನಿಯರಿಗೆ ಮುಟ್ಟಿನ ಕಪ್ ನೀಡುವ ಯೋಜನೆಗೆ ಚಾಮರಾಜನಗರ ಮತ್ತು ದಕ್ಷಿಣ ಕನ್ನಡದಲ್ಲಿ ಇಂದು ಚಾಲನೆ ನೀಡಲಾಯಿತು. ಚಾಮರಾಜನಗರದ ಬಿಳಿಗಿರಿರಂಗನ ಬೆಟ್ಟದಲ್ಲಿ ಯೋಜನೆಗೆ ಚಾಲನೆ ದೊರೆಯಿತು. ಪ್ರಸಕ್ತ ವರ್ಷದ ಬಜೆಟ್ನಲ್ಲಿ ಮುಖ್ಯಮಂತ್ರಿಗಳು ಈ ಯೋಜನೆ ಬಗ್ಗೆ ಘೋಷಣೆ ಮಾಡಿದ್ದರು.
ವಿಜಿಕೆಕೆ ಆವರಣದಲ್ಲಿ ನಟಿ ಅಮೃತಾ ಅಯ್ಯಂಗಾರ್ ಮತ್ತು ಕ್ರಿಕೆಟರ್ ವೇದಾ ಕೃಷ್ಣಮೂರ್ತಿ ಅವರು ಪೋಸ್ಟರ್ ಬಿಡುಗಡೆಗೊಳಿಸಿ, ವಿದ್ಯಾರ್ಥಿನಿಯರಿಗೆ ಮೆನ್ಸ್ಟ್ರುವಲ್ ಕಪ್ ಗಳನ್ನು ವಿತರಿಸಿದರು. ಯೋಜನೆಯ ನಿಮಿತ್ತ ವಿದ್ಯಾರ್ಥಿನಿಯರಿಗೆ ಅರಿವು ಬರಲು ವೇದಾ ಹಾಗೂ ಅಮೃತಾ ಅಯ್ಯಂಗಾರ್ ರಾಯಭಾರಿಗಳಾಗಿದ್ದಾರೆ.
ಮುಟ್ಟಿನ ಕಪ್ ಪರಿಸರ ಸ್ನೇಹಿಯಾಗಿದೆ: ಪಿರಿಯಡ್ಸ್ ಅಥವಾ ಋತುಸ್ರಾವದ ಬಗ್ಗೆ ಮುಕ್ತವಾಗಿ ಮಾತನಾಡುವ ವಾತಾವರಣ ನಿರ್ಮಾಣವಾಗಬೇಕು. ಮನೆಯಲ್ಲಿ ತಂದೆ - ತಾಯಿ, ಅಣ್ಣ- ತಮ್ಮಂದಿರೊಟ್ಟಿಗೆ ಪಿರಿಯಡ್ಸ್ ಬಗ್ಗೆ ಮಾತನಾಡಬೇಕು. ಪಿರಿಯಡ್ಸ್ ಸಹಜ ಪ್ರಕ್ರಿಯೆ ಆಗಿದ್ದು ಹಿಂಜರಿಕೆ ಏಕೆ? ಪಿರಿಯಡ್ಸ್ ಎಂದು ಪ್ರಾಕ್ಟಿಸ್ ಮಿಸ್ ಮಾಡಿಕೊಳ್ಳಬಹುದು.
ಆದರೆ, ರಿಯಲ್ ಮ್ಯಾಚ್ಗಳನ್ನು ಆಡದಿರಲು ಸಾಧ್ಯವೇ? ಋತುಸ್ರಾವದ ಎಷ್ಟೇ ನೋವಿದ್ದರೂ ನಾನು ಮ್ಯಾಚ್ಗಳನ್ನು ಆಡಿದ್ದೇನೆ. ಮುಟ್ಟಿನ ಕಪ್ ಸ್ಯಾನಿಟರಿ ಪ್ಯಾಡ್ಗಿಂತ ಬಹಳಷ್ಟು ಉಪಕಾರಿ ಮತ್ತು ಪರಿಸರ ಸ್ನೇಹಿಯಾಗಿದೆ. ನಾನು ಅದನ್ನೇ ಬಳಸುತ್ತಿರುವುದು ಎಂದು ಕ್ರಿಕೆಟರ್ ವೇದಾ ಕೃಷ್ಣಮೂರ್ತಿ ಹೇಳಿದರು.
ಪ್ಯಾಡ್ನಿಂದ ಆರೋಗ್ಯದ ಮೇಲೆ ಪರಿಣಾಮ: ನಟಿ ಅಮೃತಾ ಅಯ್ಯಂಗಾರ್ ಮಾತನಾಡಿ, ಸ್ಯಾನಿಟರಿ ಪ್ಯಾಡ್ಗಳು ಪ್ಲಾಸ್ಟಿಕ್ನಿಂದ ನಿರ್ಮಾಣವಾಗಿವೆ. ಇದು ಮಹಿಳೆಯರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಹತ್ತಾರು ಫುಟ್ಬಾಲ್ ಸ್ಟೇಡಿಯಂ ನಷ್ಟು ಸ್ಯಾನಿಟರಿ ಪ್ಯಾಡ್ ತ್ಯಾಜ್ಯ ನಿತ್ಯ ವಿಶ್ವದಲ್ಲಾಗುತ್ತಿದೆ. ಋತುಸ್ರಾವದ ಬಗ್ಗೆ ಯಾವುದೇ ಕೀಳರಿಮೆ ಇಲ್ಲದೇ ಮಾತನಾಡಿ ಎಂದು ವಿದ್ಯಾರ್ಥಿನಿಯರಿಗೆ ತಿಳಿಸಿದರು.
ಮೈತ್ರಿ ಮುಟ್ಟಿನ ಕಪ್ ಯೋಜನೆ ಜಾರಿ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ಹದಿಹರೆಯದ ಹೆಣ್ಣುಮಕ್ಕಳ ಸ್ವಚ್ಛ ಹಾಗೂ ಸುರಕ್ಷಿತ ಋತುಚಕ್ರ ನಿರ್ವಹಣೆಗಾಗಿ ಸರ್ಕಾರ ಘೋಷಿಸಿದ್ದ ಮೈತ್ರಿ ಮುಟ್ಟಿನ ಕಪ್ (ಮೆನ್ಸ್ಟ್ರುವಲ್ ಕಪ್) ಯೋಜನೆಯು ಇಂದಿನಿಂದ ಜಾರಿಯಾಗಿದೆ. ಪ್ರಾಯೋಗಿಕವಾಗಿ ಎರಡು ಜಿಲ್ಲೆಯಲ್ಲಿ ಆರಂಭಗೊಳ್ಳಲಿದೆ. ನಂತರ ರಾಜ್ಯಾದ್ಯಂತ ಇದು ಜಾರಿಗೆ ಬರಲಿದೆ ಎಂದರು.
ಶುಚಿ ಕಾರ್ಯಕ್ರಮದ ಯೋಜನೆಯಡಿ ಹದಿಹರೆಯದ ಹೆಣ್ಣು ಮಕ್ಕಳಿಗೆ ಸ್ಯಾನಿಟರಿ ನ್ಯಾಪ್ಕಿನ್ಗಳನ್ನು ಉಚಿತವಾಗಿ ಒದಗಿಸಲಾಗುತ್ತಿದೆ. ಈ ಯೋಜನೆಯು ರಾಜ್ಯಾದ್ಯಂತ ಸುಮಾರು 19 ಲಕ್ಷ ವಿದ್ಯಾರ್ಥಿನಿಯರನ್ನು ಒಳಗೊಂಡಿದೆ. ಪ್ರತಿವರ್ಷ ಸರಾಸರಿ 2.23 ಕೋಟಿ ಯೂನಿಟ್ ಸ್ಯಾನಿಟರಿ ನ್ಯಾಪ್ಕಿನ್ಗಳನ್ನು ವಿತರಿಸಲಾಗುತ್ತಿದೆ. ಎರಡು ಜಿಲ್ಲೆಯ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳ ನೋಂದಾಯಿತ 16 ರಿಂದ 18 ವರ್ಷ ವಯಸ್ಸಿನ 10 ಸಾವಿರ ವಿದ್ಯಾರ್ಥಿನಿಯರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮಂಗಳೂರಿಗೆ ಬಂದಿಳಿದ ಸೋನು ಸೂದ್
ಮೆನ್ಸ್ಟ್ರುವಲ್ ಕಪ್ (ಮುಟ್ಟಿನ ಕಪ್)ಗಳನ್ನು ಅಧಿಕ ಸಮಯದವರೆಗೆ ಅಂದರೆ 8 ರಿಂದ 12 ಗಂಟೆಗಳ ಅವಧಿಯವರೆಗೆ ಬಳಸಬಹುದು. ಸೂಕ್ತ ನಿರ್ವಹಣೆಯೊಂದಿಗೆ 8 ರಿಂದ 10 ವರ್ಷಗಳವರೆಗೆ ಸಮರ್ಥನೀಯವಾಗಿ ಮರುಬಳಕೆ ಮಾಡಬಹುದಾಗಿದ್ದು, ಹಣದ ಉಳಿತಾಯ ಜೊತೆಗೆ ಸ್ವಚ್ಛ ಪರಿಸರ ಉಳಿಸುವಲ್ಲಿ ಇದು ಸಹಾಯಕವಾಗಿದೆ. ಮೆಡಿಕಲ್ ಗ್ರೇಡ್ ಸಿಲಿಕಾನ್ ಇದನ್ನು ತಯಾರಿಸಲಿದ್ದು, ಮಾರ್ಗಸೂಚಿಯಂತೆ ಯಾವುದೇ ಹೆದರಿಕೆ ಇಲ್ಲದೇ ಬಳಸಿ ಎಂದರು.