ಗುಂಡ್ಲುಪೇಟೆ(ಚಾಮರಾಜನಗರ): ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ಜನ್ಮಭೂಮಿ ಬೆಳಗಾವಿಯ ಪೀರನವಾಡಿ ವೃತ್ತದಿಂದ ರಾಯಣ್ಣ ಪ್ರತಿಮೆಯನ್ನು ಸ್ಥಳಾಂತರಿಸಲಾಗಿದ್ದು, ಮರಳಿ ಅದೇ ಸ್ಥಳದಲ್ಲಿ ಪ್ರತಿಮೆ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿ ತಾಲೂಕು ಕುರುಬ ಸಮಾಜದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಪ್ರವಾಸಿ ಮಂದಿರದಿಂದ ಜಾಥಾ ಹೊರಟ ಪ್ರತಿಭಟನಾಕಾರರು ಬೆಳಗಾವಿ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರದ ವಿರುದ್ಧ ದಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ತಾಲೂಕು ಕಚೇರಿ ಮುಂದೆ ಜಮಾಯಿಸಿದರು.
ಈ ವೇಳೆ, ಪುರಸಭಾ ಸದಸ್ಯ ಹಾಗೂ ಕುರುಬ ಸಮುದಾಯದ ಮುಖಂಡರಾದ ಎಲ್. ಸುರೇಶ್ ಮಾತನಾಡಿ, ರಾಯಣ್ಣನ ಜನ್ಮ ಭೂಮಿಯಲ್ಲಿ ರಾಯಣ್ಣನ ಪ್ರತಿಮೆ ಸ್ಥಾಪಿಸಲು ಅಧಿಕಾರಿಗಳು ಇಲ್ಲಸಲ್ಲದ ನೆಪ ಹೇಳಿ ಅನುಮತಿ ನಿರಾಕರಿಸುತ್ತಿರುವುದು ನಾಚಿಕೆಗೇಡು ಎಂದು ಕಿಡಿಕಾರಿದರು.
ಸಂಭಾಜಿ, ಶಿವಾಜಿ, ತಾನಾಜಿಯ ಪ್ರತಿಮೆ ಸ್ಥಾಪನೆ ಸಮಯದಲ್ಲಿ ತುಟಿ ಬಿಚ್ಚದ ಅಧಿಕಾರಿಗಳು ರಾಯಣ್ಣ, ಚೆನ್ನಮ್ಮ, ಅಮಟೂರ ಬಾಳಪ್ಪ ಸೇರಿದಂತೆ ಹಲವರು ನಾಡ ಸೇನಾನಿಗಳ ಪ್ರತಿಮೆ ಸ್ಥಾಪನೆಗೆ ಮುಂದಾದಾಗ ಸುರಕ್ಷತೆ, ಕಾನೂನು, ಅನುಮತಿ, ಭದ್ರತೆ ಸೇರಿದಂತೆ ಹಲವು ನೆಪ ನೀಡಿ ತಡೆ ಹಿಡಿಯುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಆ.15 ರಂದು ರಾಯಣ್ಣನ ಹುಟ್ಟು ಹಬ್ಬದಂದೇ ಪೀರನವಾಡಿಯಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ ರಾಯಣ್ಣನ ಪ್ರತಿಮೆಯನ್ನು ತೆರವುಗೊಳಿಸಿದ್ದು, ಸಮಸ್ತ ರಾಯಣ್ಣನ ಅಭಿಮಾನಿಗಳಿಗೆ ನೋವಾಗಿದೆ. ಇದನ್ನು ಸಂಗೊಳ್ಳಿ ರಾಯಣ್ಣನ ಅಭಿಮಾನಿ ಬಳಗ ತೀವ್ರವಾಗಿ ಖಂಡಿಸುತ್ತದೆ. ಕೂಡಲೇ ಸರ್ಕಾರ ಈ ಬಗ್ಗೆ ಕ್ರಮ ಕೈಗೊಂಡು ತೆರವುಗೊಳಿಸಿದ ಜಾಗದಲ್ಲಿಯೇ ರಾಯಣ್ಣ ಪ್ರತಿಮೆಯನ್ನು ಮರು ಪ್ರತಿಷ್ಠಾಪನೆ ಮಾಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಶಿರಸ್ತೇದಾರರಾದ ಮಹೇಶ್ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ತಾಪಂ ಮಾಜಿ ಅಧ್ಯಕ್ಷ ಎಚ್.ಎನ್. ಬಸವರಾಜು, ಚಿಕ್ಕಾಟಿ ಮಹೇಶ್, ಕಲ್ಲಿಗೌಡನಹಳ್ಳಿ ಸಿದ್ದರಾಜು, ಬಸವೇಗೌಡ, ಮಲ್ಲಯ್ಯನಪುರ ಶಶಿ, ರಂಗೂಪುರ ಮಂಜು, ಗುಂಡ್ಲುಪೇಟೆ ಜನಾರ್ದನ್, ವಿಶ್ವನಾಥ್, ಕಾರ್ತಿಕ್ ಸೇರಿದಂತೆ ಇತರರು ಹಾಜರಿದ್ದರು.