ಮೈಸೂರು: ಕೇರಳದಿಂದ ಪಾದಯಾತ್ರೆ ಮುಗಿಸಿ ಕರ್ನಾಟಕಕ್ಕೆ ರಾಹುಲ್ ಗಾಂಧಿ ಅವರು ಬರುತ್ತಿದ್ದು, ಅವರ ಜೊತೆ ಪಕ್ಷಾತೀತವಾಗಿ ಮತ್ತು ಎಲ್ಲ ಸಂಘಟನೆಗಳು ಹೆಜ್ಜೆ ಹಾಕಬೇಕು. ಆ ನಡಿಗೆ ದೇಶಕ್ಕೊಂದು ಕೊಡುಗೆ ಆಗಲಿದೆ ಎಂದು ಮೈಸೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಹೇಳಿಕೆ ನೀಡಿದ್ದಾರೆ.
ಇಂದು ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಭಾರತ್ ಜೋಡೋ ಯಾತ್ರೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಕೇರಳ ಭಾಗದಲ್ಲಿ ಉತ್ತಮ ಬೆಂಬಲ ಪಡೆದುಕೊಂಡು ಕರ್ನಾಟಕದ ಕಡೆ ಬರುತ್ತಿದೆ. ಅದರ ಪೂರ್ವ ತಯಾರಿಗೆ ಸಂಬಂಧಿಸಿದಂತೆ ಮೈಸೂರಿಗೆ ಭೇಟಿ ನೀಡಿದ್ದೇವೆ ಎಂದರು.
ಭಾರತ್ ಜೋಡೋ ಯಾತ್ರೆಯ ಮೊದಲ ದಿನದಿಂದಲೇ ನಾನು, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ. ಕೆ ಹರಿಪ್ರಸಾದ್ ಜತೆಗಿದ್ದೇವೆ. ಗುಂಡ್ಲುಪೇಟೆಯಿಂದ ಆರಂಭವಾಗುವ ಯಾತ್ರೆ ಮೈಸೂರು, ಮಂಡ್ಯ, ನಾಗಮಂಗಲ ಮೂಲಕ ಬಳ್ಳಾರಿ ತಲುಪಲಿದೆ ಎಂದು ಹೇಳಿದರು.
ಕೇರಳ ರಾಜ್ಯದಲ್ಲಿ ಭಾರತ್ ಜೋಡೋ ಯಾತ್ರೆಗೆ ಅತಿದೊಡ್ಡ ಯಶಸ್ಸು ಸಿಕ್ಕಿದೆ. ಈ ದೇಶವು ಕಾಂಗ್ರೆಸ್ ಶ್ರಮವನ್ನು ಮೆಚ್ಚಿದೆ. ಯುವಕರು, ಸಾರ್ವಜನಿಕರು, ನೊಂದ ಜನರು ರಾಹುಲ್ ಗಾಂಧಿ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಯಾತ್ರೆಯನ್ನು ಕರ್ನಾಟಕದಲ್ಲಿ ಯಶಸ್ವಿ ಮಾಡಲು ಪಕ್ಷಾತೀತವಾಗಿ ಮತ್ತು ಎಲ್ಲ ಸಂಘಟನೆಗಳು ಎಲ್ಲರೂ ಭಾಗಿಯಾಗಬೇಕು. ಒಗ್ಗಟ್ಟಿನ ನಡಿಗೆ ದೇಶಕ್ಕೊಂದು ಕೊಡುಗೆ ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದರು.
ಮೈಸೂರು ಸಿಟಿ ಪಾದಯಾತ್ರೆ: ಮೈಸೂರು ಸಿಟಿ ಪಾದಯಾತ್ರೆಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಬೆಳಗ್ಗೆ 6.30 ಗಂಟೆಗೆ ಮೈಸೂರಿನ ಅರಮನೆ ಮುಂಭಾಗದಿಂದ ಪಾದಯಾತ್ರೆ ಮಾಡಲಿದ್ದಾರೆ. ಮೈಸೂರಿನ ಜನರು ಪ್ರತಿದಿನ ಬೆಳಗ್ಗೆ ವಾಕ್ ಹೋಗುವ ಅಭ್ಯಾಸ ಹೊಂದಿದ್ದು, ಅಂದು ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಬೇಕು.
ರಾಹುಲ್ ಗಾಂಧಿ ಜೊತೆ ಪಾದಯಾತ್ರೆ ಮಾಡಲು ಇಂತಹ ಉತ್ತಮ ಅವಕಾಶ ಜೀವನದಲ್ಲಿ ಒಮ್ಮೆ ಮಾತ್ರ ಬರುವ ದಿನವಾಗಿದೆ. ಎಲ್ಲರೂ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಮನವಿ ಮಾಡಿದರು.
ಗುಂಡ್ಲುಪೇಟೆಯಲ್ಲಿ ಜೋಡೋ ಯಾತ್ರೆ ಮಾರ್ಗ ಪರಿಶೀಲಿಸಿದ ಸುರ್ಜೇವಾಲಾ, ಡಿಕೆಶಿ
ಚಾಮರಾಜನಗರ: ಇದೇ 30 ರಿಂದ ರಾಜ್ಯದಲ್ಲಿ ಆರಂಭಗೊಳ್ಳುವ ಭಾರತ್ ಜೋಡೋ ಯಾತ್ರೆಯ ಮಾರ್ಗವನ್ನು ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಹಾಗೂ ಕರ್ನಾಟಕ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರು ಪರಿಶೀಲನೆ ನಡೆಸಿದರು.
ಯಾತ್ರೆ ಆರಂಭಗೊಳ್ಳುವ ಗುಂಡ್ಲುಪೇಟೆಯ ಅಂಬೇಡ್ಕರ್ ಭವನ ರಸ್ತೆ, ನಂಜನಗೂಡು ರಸ್ತೆ ಮತ್ತು ಬದನವಾಳು ಖಾದಿ ಕೇಂದ್ರಕ್ಕೆ ಕೈಪಡೆ ನಾಯಕರುಗಳು ಭೇಟಿಯಿಟ್ಟು ಭಾರತ್ ಜೋಡೋ ಯಾತ್ರೆಗಾಗಿ ಸಜ್ಜುಗೊಳ್ಳುತ್ತಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ರಾಹುಲ್ ಗಾಂಧಿ ಆಪ್ತ ಸಹಾಯಕರ ತಂಡವೂ ಭೇಟಿಕೊಟ್ಟು ಮಾರ್ಗ ಪರಿಶೀಲನೆ ನಡೆಸಿದ್ದು, ಕೈ ಪಡೆ ನಾಯಕರ 4 ಸುತ್ತಿನ ಪರಿಶೀಲನೆ ಇದಾಗಿದೆ.
ರಾಗಾ ಸೂಜಿ-ಬಿಜೆಪಿ ಕತ್ತರಿ: ಮಾರ್ಗ ಪರಿಶೀಲನೆ ಬಳಿಕ ಮಾಧ್ಯಮದವರೊಟ್ಟಿಗೆ ಡಿಕೆಶಿ ಮಾತನಾಡಿ, ತಮಿಳುನಾಡಿನ ಗೂಡ್ಲೂರಿನಿಂದ ಕರ್ನಾಟಕ ಬರಲಿರುವ ರಾಹುಲ್ ಗಾಂಧಿ ಗುಂಡ್ಲುಪೇಟೆಯಲ್ಲಿ 9 ಗಂಟೆಗೆ ಸಾರ್ವಜನಿಕ ಸಭೆ ನಡೆಸಿ ಪಾದಯಾತ್ರೆ ನಡೆಸಲಿದ್ದಾರೆ. ರಾಜ್ಯದ ಎಲ್ಲ ನಾಯಕರುಗಳು ಅಂದು ರಾಗಾ ಜೊತೆ ಹೆಜ್ಜೆ ಹಾಕಲಿದ್ದಾರೆ. ಆಕ್ಸಿಜನ್ ದುರಂತದ ಸಂತ್ರಸ್ತರೊಟ್ಟಿಗೆ ಸಂವಾದ ನಡೆಸಲು ಯೋಜಿಸಲಾಗುತ್ತಿದೆ. ಜನರು ಪಾದಯಾತ್ರೆ ನಡೆಸಲು ಉತ್ಸುಕರಾಗಿದ್ದಾರೆ ಎಂದರು.
ರಾಹುಲ್ ಗಾಂಧಿ ಐರನ್ ಲೆಗ್, ಬಿಜೆಪಿಗೆ ಇದರಿಂದ ಲಾಭ ಎಂಬ ಬಿಜೆಪಿಗರ ವ್ಯಂಗ್ಯಕ್ಕೆ ಪ್ರಯೋಜನ ಪಡೆಯಲು ಪ್ರತಿಕ್ರಿಯಿಸಿ, ರಾಹುಲ್ ಗಾಂಧಿ ಕಬ್ಬಿಣದ ಸೂಜಿ ಇದ್ದಂತೆ ಎಲ್ಲರನ್ನೂ ಒಂದುಗೂಡಿಸಿಕೊಂಡು ಬರುತ್ತಿದ್ದಾರೆ. ಬಿಜೆಪಿಗರು ಕತ್ತರಿ ಇದ್ದಂತೆ ಎಲ್ಲರನ್ನು ಇಬ್ಭಾಗ ಮಾಡುತ್ತಿದ್ದಾರೆ. ನಾವು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಕಿಡಿಕಾರಿದರು.
ಓದಿ: ಸಿದ್ದರಾಮಯ್ಯ ತಾವು ಉಡುವ ಪಂಚೆಯಷ್ಟೇ ಕ್ಲೀನ್ ಇದ್ದಾರಾ: ಸಿಟಿ ರವಿ ಪ್ರಶ್ನೆ