ಕೊಳ್ಳೇಗಾಲ(ಚಾಮರಾಜನಗರ): ಕೊರೊನಾ ಗ್ರಾಮೀಣ ಭಾಗದಲ್ಲಿ ವ್ಯಾಪಿಸುತ್ತಿದ್ದರೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮವಾಗಿ ಸೋಂಕಿತರ ಮನೆಗೆ ಸಾನಿಟೈಸ್ ಮಾಡಿಸುತ್ತಿಲ್ಲ. ಸೋಂಕಿತರ ಲೆಕ್ಕವೂ ಇವರಿಗೆ ಗೊತ್ತಿಲ್ಲವೆಂದು ಪಿಡಿಒಗೆ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ತಾಲೂಕಿನ ಮಧುವನಹಳ್ಳಿ ಪ್ರೌಢ ಶಾಲಾ ಆವರಣದಲ್ಲಿ ನಡೆದ ಕೋವಿಡ್ ಜಾಗೃತಿ ಸಭೆಯಲ್ಲಿ ಕೆಲ ಗ್ರಾಮಸ್ಥರು ತಾಲೂಕು ಆಡಳಿತದ ವಿರುದ್ಧ ಗಂಭೀರ ಆರೋಪ ಮಾಡಿದರು. ಸಭೆ ಪ್ರಾರಂಭವಾಗುತ್ತಿದ್ದಂತೆ ಮಧುವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಮಧುವನಹಳ್ಳಿ, ಟಿ.ಸಿ.ಹುಂಡಿ ಹಾಗೂ ಹೊಂಡರಬಾಳು ಗ್ರಾಮಗಳು ಸೇರಿದ್ದು, ಇದು ದೊಡ್ಡ ಪಂಚಾಯಿತಿಯಾಗಿದೆ. ಇತ್ತೀಚೆಗೆ ಕೋವಿಡ್ ಪ್ರಕರಣಗಳು ಹೆಚ್ಚು ಬೆಳಕಿಗೆ ಬರುತ್ತಿವೆ. ಆದರೆ, ಇಲ್ಲಿನ ಗ್ರಾಮ ಪಂಚಾಯಿತಿ ಮಾತ್ರ ಕೋವಿಡ್ ತಡೆಗಟ್ಟಲು ಯಾವುದೇ ಕ್ರಮ ವಹಿಸದೆ ನಿರ್ಲಕ್ಷ್ಯ ತೋರುತ್ತಿದೆ. ಸೋಂಕಿತರ ಮನೆಗೆ ಸಾನಿಟೈಸ್ ಮಾಡುವುದು, ಬೀದಿ ಬೀದಿಗೆ ಬ್ಲೀಚಿಂಗ್ ಸಿಂಪಡಿಸುವುದನ್ನು ಸಮರ್ಪಕವಾಗಿ ಮಾಡುತ್ತಿಲ್ಲ.
ಇನ್ನು ಸೋಂಕಿತರು ಎಷ್ಟು ಜನ ಇದ್ದಾರೆ ಎಂಬ ಮಾಹಿತಿಯೂ ಅವರಿಗಿಲ್ಲ ಎಂದು ಗ್ರಾಪಂ ಸದಸ್ಯ ಮಲ್ಲೇಶ್, ರಾಚ್ಚಪ್ಪಾಜಿ, ಗ್ರಾಮಸ್ಥರಾದ ವಿಜಯ್ ಕುಮಾರ್, ಬಾಲಸುಬ್ರಹ್ಮಣ್ಯಂ, ವಿಜಯ್ ಗಂಭೀರವಾಗಿ ಆರೋಪಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಪಿಡಿಒ ಶಶಿಕಲಾ, ಗ್ರಾಮ ವ್ಯಾಪ್ತಿಯಲ್ಲಿ ಬ್ಲೀಚಿಂಗ್ ಸಿಂಪಡಿಸಲಾಗುತ್ತಿದೆ. ಸೋಂಕಿತರ ಮನೆಗೂ ವಾಟರ್ ಮ್ಯಾನ್ ಕಡೆಯಿಂದ ಸಾನಿಟೈಸ್ ಮಾಡಲಾಗುತ್ತಿದೆ ಎಂದು ಹೇಳುತ್ತಿದ್ದಂತೆ ಗ್ರಾಮಸ್ಥರು ಮಧ್ಯ ಪ್ರವೇಶಿಸಿ ನೀವು ಯಾವ ವಾರ್ಡ್‌ನಲ್ಲಿ ಸಾನಿಟೈಸ್ ಮಾಡಿದ್ದೀರಿ, ಸೋಂಕಿತರ ಪಟ್ಟಿ ಕೊಡಿ ಎಂದು ಕೇಳಿದರು. ನೀವು ಕೆಲವೊಂದು ಕಡೆ ಕೆಲಸ ಮಾಡಿ ಊರೆಲ್ಲ ಮುಗಿದಿದೆ ಎಂದು ಮಾಹಿತಿ ನೀಡುವುದು ಸರಿಯಲ್ಲ. ಕೋವಿಡ್ ತಡೆಯ ಮುನ್ನೆಚ್ಚರಿಕೆ ಕ್ರಮದ ಕಾರ್ಯ ಸಮರ್ಪಕವಾಗಿ ಗ್ರಾಮ ಪಂಚಾಯಿತಿ ನಡೆಸುತ್ತಿಲ್ಲವೆಂದು ಪಿಡಿಒ ಶಶಿಕಲಾ ಮಾತನ್ನು ಅಲ್ಲೆಗಳೆದರು.
ಬಳಿಕ ತಹಶಿಲ್ದಾರ್ ಕುನಾಲ್ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯ ಸೋಂಕಿತರ ಪಟ್ಟಿ ಹಾಗೂ ಸಾನಿಟೈಸ್ ಮಾಡಬೇಕಾಗಿರುವ ಸ್ಥಳ ಗುರುತಿಸಿ ಸಂಜೆ ಒಳಗೆ ಗ್ರಾಮ ಪಂಚಾಯಿತಿ ನನಗೆ ಮಾಹಿತಿ ನೀಡಬೇಕು. ಗ್ರಾಮಸ್ಥರಿಗಿರುವ ಸಮಸ್ಯೆಗಳನ್ನು ಆಲಿಸಿದ್ದೇನೆ. ಇನ್ನು ಮೂರು ದಿನದಲ್ಲಿ ಆರೋಪಿಸಿರುವ ಸಮಸ್ಯೆಯನ್ನು ಸರಿಪಡಿಸಲಾಗುವುದು. ಪ್ರತಿಯೊಬ್ಬರು ಲಸಿಕೆ ಪಡೆದುಕೊಳ್ಳಿ. ಕೊರೊನಾ ನಿಯಂತ್ರಣಕ್ಕೆ ಕೈಜೋಡಿಸಿ ಎಂದರು.
ಡಿವೈಎಸ್ಪಿ ನಾಗರಾಜು ಮಾತನಾಡಿ, ಒಬ್ಬರಿಗೊಬ್ಬರು ಆರೋಪಿಸುವ ಸಂದರ್ಭ ಇದಲ್ಲ. ಹಾಗೆ ಮಾಡುತ್ತಾ ಹೋದರೆ ಕೆಲಸವಾಗಲ್ಲ. ಪ್ರತಿಯೊಬ್ಬರೂ ಕೊರೊನಾ ಪರಿಸ್ಥಿತಿ ಅರಿತು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ವಿಶೇಷವಾಗಿ ಪಿಡಿಒ ಅವರು ಗ್ರಾಮದ ಆರೋಗ್ಯಕ್ಕೆ ದುಡಿಯಬೇಕು. ಗ್ರಾಮಗಳಲ್ಲಿ ಇಸ್ಪೀಟ್ ಆಡುವುದು, ಗುಂಪುಗೂಡುವುದು, ಅಕ್ರಮ ಮದ್ಯ ಮಾರುವುದು ಕಾನೂನು ಬಾಹಿರ ಆದ್ದರಿಂದ ಪ್ರತಿಯೊಬ್ಬರು ಅನಗತ್ಯವಾಗಿ ಊರು ತಿರುಗದೆ ಮನೆಯಲ್ಲಿಯೇ ಇರಬೇಕು ಎಂದು ಸಲಹೆ ನೀಡಿದರು.
ಇದನ್ನೂ ಓದಿ: ಕಲಬುರಗಿಯ ಈ 4 ಗ್ರಾಮಗಳು ಕೊರೊನಾ ಮುಕ್ತ... ಹೇಗೆ ಗೊತ್ತಾ!?